ಪರಭಕ್ಷಕ ಮೀನುಗಳು 555 ರೇಜರ್ ನಷ್ಟು ಚೂಪಾದ ಹಲ್ಲುಗಳನ್ನು ಹೊಂದಿದ್ದು, ಹಲ್ಲುಗಳು ಬೀಳುವಷ್ಟು ಬೇಗನೆ ಬೆಳೆಯುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಪೆಸಿಫಿಕ್ ಲಿಂಗ್ಕೋಡ್ ತನ್ನ ಬಾಯಿಯಲ್ಲಿ ನೂರಾರು ಹಲ್ಲುಗಳನ್ನು ಹೊಂದಿದೆ. ಹೊಸ ಅಧ್ಯಯನದ ಪ್ರಕಾರ, ಈ ಮೀನುಗಳು ಪ್ರತಿ ದಿನ 20 ಹಲ್ಲುಗಳನ್ನು ಕಳೆದುಕೊಳ್ಳುತ್ತವೆಯಂತೆ. ಪರಭಕ್ಷಕ ಮೀನುಗಳು ಸಾಮಾನ್ಯವಾಗಿ ಉತ್ತರ ಪೆಸಿಫಿಕ್ನಲ್ಲಿ ಕಂಡುಬರುತ್ತದೆ. ಪ್ರೌಢಾವಸ್ಥೆಯಲ್ಲಿ ಮೀನುಗಳು 50 ಸೆಂ.ಮೀ. ವರೆಗೆ ಬೆಳೆಯಬಹುದು. ಇನ್ನೂ ಕೆಲವು ಮೀನುಗಳು 1.5 ಮೀಟರ್ಗಳಷ್ಟು ದೊಡ್ಡದಾಗಿರುವ ಬಗ್ಗೆ ವರದಿಗಳಿವೆ.
ಈ ಪರಭಕ್ಷಕ ಮೀನುಗಳಿಗೆ ತುಂಬಾ ಸೂಕ್ಷ್ಮವಾದಂತಹ ಹಲ್ಲುಗಳಿವೆ. ಅದು ರೇಜರ್ ನಂತೆ ಚೂಪಾಗಿದ್ದು, ಬಾಯಿಯ ಪ್ರತಿಯೊಂದು ಎಲುಬಿನ ಮೇಲ್ಮೈಯನ್ನು ಆವರಿಸಿದೆ. ಅದರ ಬಾಯಿಯು ಸಣ್ಣ ಹಲ್ಲಿನ ಸ್ಟ್ಯಾಲಕ್ಟೈಟ್ಗಳಿಂದ ತುಂಬಿರುತ್ತದೆ ಮತ್ತು ಫಾರಂಜಿಲ್ ದವಡೆಗಳನ್ನು ಸಹ ಹೊಂದಿದೆ.
ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಅಭ್ಯರ್ಥಿಯಾದ ಕಾರ್ಲಿ ಕೊಹೆನ್ ಮತ್ತು ಅಧ್ಯಯನದ ಪ್ರಮುಖ ಲೇಖಕ ಎಮಿಲಿ ಕಾರ್ ಅವರು, ಈ ಪರಭಕ್ಷಕ ಮೀನುಗಳು ಎಷ್ಟು ಹಲ್ಲುಗಳನ್ನು ಕಳೆದುಕೊಂಡಿವೆ ಎಂಬುದನ್ನು ಲೆಕ್ಕಹಾಕಲು ಮೀನುಗಳನ್ನು ಅಧ್ಯಯನ ಮಾಡಿದ್ದಾರೆ. ಅವರು ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ 20 ಪೆಸಿಫಿಕ್ ಲಿಂಗ್ಕೋಡ್ನಿಂದ ಹಲ್ಲುಗಳನ್ನು ಸಂಗ್ರಹಿಸಿದ್ದಾರೆ.
ಪೆಸಿಫಿಕ್ ಲಿಂಗ್ಕೋಡ್ನ ಹಲ್ಲುಗಳು ಗಾತ್ರದಲ್ಲಿ ಸೂಕ್ಷ್ಮವಾಗಿರುವುದರಿಂದ, ಅವು ನೀರಿನ ತೊಟ್ಟಿಯ ಕೆಳಭಾಗಕ್ಕೆ ಏನಾದರೂ ಬಿದ್ದು ಬಿಟ್ಟರೆ ಸಂಶೋಧಕರು ಅವುಗಳನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವರು ನೀರಿನ ತೊಟ್ಟಿಯಲ್ಲಿ ಕೆಂಪು ಬಣ್ಣವನ್ನು ಹಾಕಿದ್ದರು. ಅವು ಹಲ್ಲುಗಳನ್ನು ಕೆಂಪು ಬಣ್ಣಕ್ಕೆ ತಿರುಗಿಸುವುದರಿಂದ ಬಹಳ ಬೇಗ ಗುರುತಿಸಲು ಸಾಧ್ಯವಾಯಿತು.
ಇನ್ನು ಮೀನುಗಳಿಗೆ ಹೆಚ್ಚು ಆಹಾರ ನೀಡುವುದರಿಂದ ಅವುಗಳ ಹಲ್ಲಿನಲ್ಲಿ ಯಾವುದೇ ವ್ಯತ್ಯಾಸವಾಗುತ್ತದೆಯೇ ಎಂದು ಕಂಡುಹಿಡಿಯಲು ಸಂಶೋಧಕರು ಪ್ರಯತ್ನಿಸಿದ್ರು. ಆದರೆ, ಇದರಲ್ಲಿ ಯಾವುದೇ ರೀತಿಯ ವ್ಯತ್ಯಾಸವನ್ನು ತೋರಿಸಲಿಲ್ಲ. ಹೀಗಾಗಿ ಇನ್ನೂ ನಿಗೂಢವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.