ಬೆಂಗಳೂರು: ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸುವ ಸಂದರ್ಭದಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಜರಾಗಿದ್ದನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಯುವ ಸಂದರ್ಭದಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಜರಿರುವ ಬಗ್ಗೆ ಮಾಹಿತಿ ಪಡೆದ ಕಾಂಗ್ರೆಸ್ ನಾಯಕರು ಅವರನ್ನು ಹೊರಗೆ ಕಳುಹಿಸಿದ್ದಾರೆ.
ಬಿಜೆಪಿ ಸರ್ಕಾರ ಬಿಟ್-ಕಾಯಿನ್ ಹಗರಣದಲ್ಲಿ ಶಾಮೀಲಾಗಿದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಅಧಿಕಾರಿಗಳನ್ನು ಸುದ್ದಿಗೋಷ್ಠಿಯ ಮಾಹಿತಿ ಪಡೆಯಲು ಸರ್ಕಾರ ಕಳುಹಿಸಿಕೊಟ್ಟಿದೆ. ಹಾಗಾಗಿಯೇ ನಾವು ಸರ್ಕಾರದ ಅಧೀನದ ತನಿಖಾ ಸಂಸ್ಥೆಯ ಮೂಲಕ ಬಿಟ್ ಕಾಯಿನ್ ಹಗರಣದ ತನಿಖೆಯಿಂದ ಪ್ರಯೋಜನವಿಲ್ಲವೆಂದು ಹೇಳುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ಹಗರಣದ ವಿಚಾರದಲ್ಲಿ ಬಿಜೆಪಿ ಸರ್ಕಾರ ಒತ್ತಡ ಎದುರಿಸುತ್ತಿದೆ. ಇಲ್ಲದಿದ್ದರೆ ಅವರು ಪೊಲೀಸ್ ಅಧಿಕಾರಿಗಳನ್ನು ಸಾಮಾನ್ಯ ಉಡುಪಿನಲ್ಲಿ ಹೇಗೆ ಪತ್ರಿಕಾಗೋಷ್ಠಿಗೆ ಕಳುಹಿಸುತ್ತಿದ್ದರು. ಗೃಹ ಸಚಿವರು ಇದರ ಬಗ್ಗೆ ವಿವರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.