ಬೆಳಗಾವಿ: ಟಿಕೆಟ್ ಘೋಷಣೆಗೂ ಮೊದಲೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಚಾರಕ್ಕೆ ಇಳಿದಿದ್ದಾರೆ. ಸಹೋದರ ಲಖನ್ ಜಾರಕಿಹೊಳಿ ಪರವಾಗಿ ರಮೇಶ ಜಾರಕಿಹೊಳಿ ಪ್ರಚಾರ ಕೈಗೊಂಡಿದ್ದಾರೆ.
ಡಿಸೆಂಬರ್ 10ರಂದು ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಟಿಕೆಟ್ ಘೋಷಣೆ ಮೊದಲೇ ಗೋಕಾಕ ಕ್ಷೇತ್ರದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಗ್ರಾಮಪಂಚಾಯಿತಿ ಸದಸ್ಯರನ್ನು ಭೇಟಿಯಾಗಿ ಲಖನ್ ಜಾರಕಿಹೊಳಿ ಪರ ಪ್ರಚಾರ ನಡೆಸಿದ್ದಾರೆ. ಖಾನಾಪುರದ ಹೋಟೆಲ್ ನಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಮಹಾಂತೇಶ ಕವಟಗಿಮಠ ಅವರಿಗೆ ಒಂದು ಮತ, ಸಹೋದರ ಲಖನ್ ಗೆ ಒಂದು ಮತ ನೀಡುವಂತೆ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆನ್ನಲಾಗಿದೆ.
ಎರಡು ದಿನಗಳ ಹಿಂದೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ದ್ವಿಸದಸ್ಯ ಕ್ಷೇತ್ರದಿಂದ ಸೋದರ ಲಖನ್ ಜಾರಕಿಹೊಳಿಗೆ ಬಿಜೆಪಿ ಎರಡನೇ ಅಭ್ಯರ್ಥಿಯಾಗಿ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದರು. ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.