ಗಡಿ ಪ್ರದೇಶದಲ್ಲಿ ತಪಾಸಣೆ ಮಾಡುವ ನೆವದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಮಹಿಳೆಯರನ್ನು ಅಸಹನೀಯವಾದ ರೀತಿಯಲ್ಲಿ ಮುಟ್ಟುತ್ತಾರೆ ಎಂದು ಹೇಳಿದ ತೃಣಮೂಲ ಕಾಂಗ್ರೆಸ್ನ ಶಾಸಕ ಉದಯನ್ ಗುಹಾ ಹೊಸ ವಿವಾದ ಸೃಷ್ಟಿಸಿದ್ದಾರೆ. ಗುಹಾ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಿಜೆಪಿ, “ಭದ್ರತಾ ಪಡೆಗಳಿಗೆ ಅವಮಾನ ಮಾಡಿದ್ದಾರೆ,” ಎಂದಿದೆ.
ಆರೋಗ್ಯ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಅತ್ಯವಶ್ಯಕ
ಬಿಎಸ್ಎಫ್ನ ಕಾರ್ಯಚರಣಾ ವ್ಯಾಪ್ತಿಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುವ ವಿಧೇಯಕದ ಸಂಬಂಧ ಪಶ್ಚಿಮ ಬಂಗಾಳದ ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ಗುಹಾ, “ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರ ಮೇಲೆ ಬಿಎಸ್ಎಫ್ ನಡೆಸುವ ಅತಿರೇಕಗಳನ್ನು ನೋಡಿದ್ದೇವೆ. ತಪಾಸಣೆ ನೆವದಲ್ಲಿ ತನ್ನ ತಾಯಿಯನ್ನು ಅಸಹನೀಯವಾಗಿ ಮುಟ್ಟುವುದನ್ನು ನೋಡಿದ ಮಗುವೊಂದು ಅಲ್ಲಿಂದ ಮರಳಿದಾಗ ದೇಶಭಕ್ತಳಾಗಿರಲು ಸಾಧ್ಯವಿಲ್ಲ. ಅದರ ಮುಂದೆ ನೀವೆಷ್ಟೇ ಬಾರಿ ’ಭಾರತ್ ಮಾತಾ ಕೀ ಜೈ’ ಘೋಷ ಮೊಳಗಿಸಿದರೂ ಅಷ್ಟೇ. ಇಂಥ ಘಟನೆಗಳಿಂದ ಸಮಾಜ ವಿರೋಧಿ ಶಕ್ತಿಗಳಿಗೆ ಹುಟ್ಟು ನೀಡುತ್ತವೆ,” ಎಂದು ಸದನದಲ್ಲಿ ತಿಳಿಸಿದ್ದಾರೆ.
ಗುಹಾರ ಹೇಳಿಕೆಯನ್ನು ಕಿತ್ತೊಗೆಯಬೇಕೆಂದು ಬಿಜೆಪಿ ಶಾಸಕರು ಬೇಡಿಕೆ ಇಟ್ಟರೂ ಅವರ ಮಾತಿಗೆ ಸ್ಪೀಕರ್ ಸೊಪ್ಪು ಹಾಕಲಿಲ್ಲ. ಬಳಿಕ ವರದಿಗಾರರೊಂದಿಗೆ ಮಾತನಾಡಿದ ಗುಹಾ, “ನಾನು ನಿಜ ಹೇಳಿದ್ದೇನೆ,” ಎಂದಿದ್ದಾರೆ.
ಜೀವನದಲ್ಲಿ ಪ್ರೀತಿ ದುಪ್ಪಟ್ಟು ಮಾಡುತ್ತೆ ʼಫೆಂಗ್ ಶುಯಿʼ ಉಪಾಯ
“ಇಂಥ ಹೇಳಿಕೆಗಳು ಅಕ್ಷಮ್ಯ ಮಾತ್ರವಲ್ಲದೇ, ನಮ್ಮ ಭದ್ರತಾ ಪಡೆಗಳಿಗೆ ಅವಮಾನ ಮಾಡಿದಂತೆ. ಭದ್ರತಾ ಪಡೆಗಳು ನಮ್ಮ ದೇಶದ ಹೆಮ್ಮೆಯಾಗಿವೆ. ಈ ಹೇಳಿಕೆಗಳು ಟಿಎಂಸಿ ಶಾಸಕರ ಮನಸ್ಥಿತಿಗಳನ್ನು ಪ್ರತಿಧ್ವನಿಸುತ್ತವೆ,” ಎಂದಿದ್ದಾರೆ ಬಿಜೆಪಿ ಶಾಸಕಿ ಶ್ರೀರೂಪಾ ಮಿತ್ರಾ ಚೌಧರಿ.