ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. ಇನ್ನೇನು ಆತಂಕ ದೂರವಾಯಿತು ಎನ್ನುವಾಗಲೇ ಮತ್ತೊಂದು ಹೊಸ ಸೋಂಕು ಕಾಣಿಸಿಕೊಂಡಿದೆ. ಕೊರೋನಾಗಿಂತಲೂ ಅಪಾಯಕಾರಿಯಾದ ಆರೋಗ್ಯ ಸಮಸ್ಯೆ ಸದ್ದಿಲ್ಲದೆ ವ್ಯಾಪಿಸುತ್ತಿದೆ.
ಯಾವುದೇ ರೋಗ ನಿರೋಧಕ ಔಷಧಗಳಿಗೂ ಬಗ್ಗದ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್(AMR) ಸಮಸ್ಯೆಯ ಕುರಿತಂತೆ ವಿಶ್ವಸಂಸ್ಥೆ ಭಾರತದ ಗಮನ ಸೆಳೆದಿದ್ದು, ಈಗಾಗಲೇ ಕೇರಳ ಸರ್ಕಾರ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ವಿರುದ್ಧ ಸಮರ ಸಾರಿದೆ. ಉಳಿದ ರಾಜ್ಯಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹೇಳಲಾಗಿದೆ.
ಬ್ಯಾಕ್ಟೀರಿಯಾ, ವೈರಸ್ ಸೋಂಕಿತರಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೆಲಸ ಮಾಡುವುದಿಲ್ಲ. ಕೊರೋನಾ ನಂತರ ಈ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತೀಯ ಅಧಿಕಾರಿ ಅನುಜ್ ಶರ್ಮಾ ತಿಳಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವುದೇ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎನ್ನಲಾಗಿದೆ. ಯಾವುದೇ ವ್ಯಕ್ತಿಗಳಲ್ಲಿ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಕಾಣಿಸಿಕೊಂಡರೆ ಯಾವುದೇ ಔಷಧಗಳಿಗೆ ಪರಿಣಾಮ ಬೀರುವುದಿಲ್ಲ. ಸಾವು ಸಂಭವಿಸುವ ಸಾಧ್ಯತೆ ಅಪಾಯವಿದೆ. ಕೊರೋನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ವೇಗವಾಗಿ ತಗಲುವ ಸಾಧ್ಯತೆ ಇದೆ ಎಂದು ಅಮೆರಿಕ ರೋಗ ನಿಯಂತ್ರಣ ಕೇಂದ್ರದ ತಜ್ಞರು ಹೇಳಿದ್ದಾರೆ.
ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಆಗಾಗ ಕೈತೊಳೆದುಕೊಳ್ಳಬೇಕು. ಕಡ್ಡಾಯವಾಗಿ ಕೋವಿಡ್ ನಿರೋಧಕ ಲಸಿಕೆ ಪಡೆಯಬೇಕು. ಕೊರೋನಾದಿಂದ ಬಳಲುತ್ತಿರುವವರ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಲ್ಲದೆ ಅವರಿಗೆ ಆಂಟಿಬಯೋಟಿಕ್ಸ್ ನೀಡುವುದರಿಂದ ಅವರಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುವುದಿಲ್ಲ. ಆಗ ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.