ಕೋಲ್ಕತ್ತಾ: 92 ವರ್ಷ ವಯಸ್ಸಾಗಿರುವ ಬಂಗಾಳದ ವೃದ್ಧರೊಬ್ಬರು ಹಲವಾರು ಕಚೇರಿಗಳನ್ನು ಅಲೆದ ಬಳಿಕ ಕೋರ್ಟ್ ಮೊರೆ ಹೋಗಿದ್ದಾರೆ. ಈ ವೃದ್ಧ ವ್ಯಕ್ತಿಗೆ ಇರುವುದು ಒಂದೇ ಒಂದು ಆಸೆ. ಅದೇನೆಂದ್ರೆ ತನ್ನ ಹಳ್ಳಿಯಲ್ಲಿ ಒಂದು ಆಸ್ಪತ್ರೆ ನಿರ್ಮಾಣವಾಗಬೇಕು ಎಂಬುದು ಇವರ ಕನಸಾಗಿದೆ.
ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಾಗ ಗುರುದಾಸ್ ಚಟರ್ಜಿ ಕೇವಲ 18 ವರ್ಷ ವಯಸ್ಸಿನವರಾಗಿದ್ದರು. ಇಂದು ಅವರ ವಯಸ್ಸು 92. ಆದರೆ, ವಯಸ್ಸು ಅವರ ದೃಢತೆಯನ್ನು ಕುಗ್ಗಿಸಲು ಸಾಧ್ಯವಾಗಿಲ್ಲ. ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ನಿವಾಸಿಯಾಗಿರುವ ಚಟರ್ಜಿಗೆ ತನ್ನ ಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಬೇಕು ಅನ್ನೋದು ಇವರ ಆಶಯವಾಗಿದೆ.
ಆಸ್ಪತ್ರೆ ನಿರ್ಮಾಣಕ್ಕಾಗಿ ಚಟರ್ಜಿ ಅವರು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮವು ಹೈಮಾಬಾತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೊಂದಿದೆ. 1918 ರಲ್ಲಿ ಸ್ಥಾಪಿತವಾದ ದವಾಖಾನೆಯು ವಿಶಾಲವಾದ ಜಮೀನಿನಲ್ಲಿದೆ. 2020 ರಿಂದ ಇಲ್ಲಿ ಯಾವುದೇ ವೈದ್ಯರ ನೇಮಕವೇ ಆಗಿಲ್ಲ.
ಈ ಸುಸಜ್ಜಿತ ಕಟ್ಟಡದಲ್ಲಿ ನಾಮಮಾತ್ರ ಸಿಬ್ಬಂದಿ ಇದ್ದಾರೆ. ಆದರೆ ಒಂದು ಕಾಲದಲ್ಲಿ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಜ್ಯ ಆರೋಗ್ಯ ಇಲಾಖೆಯು ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂಬ ಪ್ರಾರ್ಥನೆಯೊಂದಿಗೆ ಚಟರ್ಜಿ ಕೋಲ್ಕತ್ತಾ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಇನ್ನು ರಾಜ್ಯ ಆರೋಗ್ಯ ಇಲಾಖೆಯ ನಿಯಮಗಳ ಪ್ರಕಾರ ಕನಿಷ್ಠ 30,000 ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಮಾತ್ರ ಆಸ್ಪತ್ರೆಗಳನ್ನು ನಿರ್ಮಿಸಬೇಕು. ಪಂಚರ ಜನಸಂಖ್ಯೆ 22,405 ಇದೆ. ಮಾಶಗ್ರಾಮ, ಪಂಚರ, ಮತ್ತು ದಾದ್‌ಪುರ ಉಪಕೇಂದ್ರಗಳು ಆರೋಗ್ಯ ಕೇಂದ್ರದ 0.2-5ಕಿಮೀ ವ್ಯಾಪ್ತಿಯಲ್ಲಿವೆ. ಹಾಗಾಗಿ ಈ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸಲು ರಾಜ್ಯ ಆರೋಗ್ಯ ಇಲಾಖೆ ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಪ್ರದೇಶದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಮತ್ತು ಕೇಂದ್ರ ಸರ್ಕಾರವು ಆರೋಗ್ಯ ಕೇಂದ್ರದ ನಿರ್ಮಾಣಕ್ಕೆ ಸಹಾಯ ಮಾಡುವ ಕೆಲವು ಯೋಜನೆಗಳನ್ನು ಹೊಂದಿದೆ ಎಂದು ಹೈಕೋರ್ಟ್ ವಕೀಲ ರವಿಶಂಕರ್ ಚಟರ್ಜಿ ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಚಟರ್ಜಿ, ತಾನು ಕಣ್ಣುಮುಚ್ಚುವುದರೊಳಗೆ ಗ್ರಾಮದಲ್ಲಿ ಆಸ್ಪತ್ರೆ ನೋಡಲು ಬಯಸುವುದಾಗಿ ಹೇಳಿದ್ದಾರೆ.