ಕೊರೊನಾ ನಂತ್ರ ವಿಶ್ವದಲ್ಲಿ ಆರ್ಥಿಕತೆ ಸುಧಾರಿಸುತ್ತಿದೆ. ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದರು. ಈಗ ಮತ್ತೆ ನೇಮಕಾತಿ ಶುರುವಾಗಿದೆ. ಆದ್ರೆ ಅಮೆರಿಕಾದಲ್ಲಿ ಕೆಲಸ ಬಿಡುವವರ ಸಂಖ್ಯೆ ಹೆಚ್ಚಾಗಿದೆ.
ಅಮೆರಿಕಾದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಉದ್ಯೋಗ ಬಿಟ್ಟುಬಿಡುತ್ತಿದ್ದಾರೆ. ವಿಶೇಷವೆಂದರೆ ಕೆಲಸ ಬಿಟ್ಟವರ ಬಳಿ ಹಣವಿಲ್ಲ. ಕೈನಲ್ಲಿ ಬೇರೆ ಉದ್ಯೋಗವಿಲ್ಲ. ಆದ್ರೂ ಕೆಲಸ ಬಿಡುವುದು ಮುಂದುವರೆದಿದೆ.
ಯುಎಸ್ ಕಾರ್ಮಿಕ ಇಲಾಖೆಯ ಮಾಹಿತಿಯ ಪ್ರಕಾರ, ಈ ವರ್ಷ ಸುಮಾರು 30 ಮಿಲಿಯನ್ ಜನರು ತಮ್ಮ ಉದ್ಯೋಗ ಬಿಟ್ಟಿದ್ದಾರಂತೆ. ಈ ವರ್ಷ ಏಪ್ರಿಲ್ ನಂತರ ಕೆಲಸ ಬಿಡುವ ಪ್ರಕ್ರಿಯೆ ಹೆಚ್ಚಾಗಿದೆಯಂತೆ.
ಅಂದಿನಿಂದ ಸುಮಾರು 2.5 ಕೋಟಿ ಜನರು ತಮ್ಮ ಉದ್ಯೋಗ ತೊರೆದಿದ್ದಾರೆ. ಸೆಪ್ಟೆಂಬರ್‌ನಲ್ಲಿ 44 ಲಕ್ಷ ಜನರು ಕೆಲಸ ಬಿಟ್ಟಿದ್ದಾರೆ. ಆಗಸ್ಟ್ ನಲ್ಲಿ 43 ಲಕ್ಷ ಜನರು ಕೆಲಸಕ್ಕೆ ಮರಳಿಲ್ಲ. ಸೆಪ್ಟೆಂಬರ್‌ನಲ್ಲಿ 1 ಕೋಟಿ 40 ಲಕ್ಷ ಉದ್ಯೋಗಗಳು ಖಾಲಿ ಇವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೆನಡಾ, ಯುಕೆಯಲ್ಲಲ್ಲದೆ, ಜರ್ಮನಿಯಲ್ಲೂ ಕೆಲಸ ಖಾಲಿಯಿದೆ. ಕಂಪನಿಗಳು ಉದ್ಯೋಗಿಗಳ ಹುಡುಕಾಟ ನಡೆಸುತ್ತಿದೆ. ಆದ್ರೆ ಕೆಲಸಕ್ಕೆ ಬರುವವರು ಕಾಣ್ತಿಲ್ಲ.
ಕೆಲವರು ಉನ್ನತ ಉದ್ಯೋಗ ಹಾಗೂ ಉತ್ತಮ ಕಚೇರಿ ವಾತಾವರಣ ಬಯಸಿ ಕೆಲಸ ಬಿಡ್ತಿದ್ದಾರೆ. ಮತ್ತೆ ಕೆಲವರು ಯಾವುದೇ ಹೊಸ ಕೆಲಸಕ್ಕಾಗಿ ಕೆಲಸ ಬಿಡುತ್ತಿಲ್ಲ. ಅವರಿಗೆ ಕೆಲಸದ ಅಗತ್ಯವೂ ಇಲ್ಲ. ಇದ್ರಲ್ಲಿ ತಾಯಂದಿರೂ ಸೇರಿದ್ದಾರೆ. ಮಕ್ಕಳಿಗಾಗಿ ಕೆಲಸ ಬಿಡುತ್ತಿರುವ ತಾಯಂದಿರ ಸಂಖ್ಯೆ ಹೆಚ್ಚಿದೆ.
ಅಮೆರಿಕಾದಲ್ಲಿ ಕೆಲವರು ಕೊರೊನಾ ಸಮಯದಲ್ಲಿ ಕೆಲಸ ಮಾಡಿ, ಹೆಚ್ಚಿನ ಹಣ ಗಳಿಸಿದ್ದಾರೆ. ಅದನ್ನು ಈಗ ಬಳಸುತ್ತಿದ್ದು, ಮತ್ತೆ ಕೆಲಸಕ್ಕೆ ಹೋಗಲು ಅವಸರ ಮಾಡ್ತಿಲ್ಲ. ಇದಲ್ಲದೆ ಬದಲಾದ ಕೆಲಸದ ವಿಧಾನ ಕೂಡ ಕೆಲಸ ಬಿಡಲು ಕಾರಣವಾಗಿದೆ.
ಕೆಲ ಕಂಪನಿಗಳು ಒಂದು ದಿನ ಮನೆ, ಒಂದು ದಿನ ಕಚೇರಿ ಕೆಲಸಕ್ಕೆ ಆದ್ಯತೆ ನೀಡ್ತಿವೆ. ಇದು ಕೆಲವರಿಗೆ ಕಿರಿಕಿರಿಯುಂಟು ಮಾಡಿದೆ. ಮತ್ತೆ ಕೆಲವರಿಗೆ ವರ್ಕ್ ಫ್ರಂ ಹೋಮ್ ಸಮಸ್ಯೆಯಾಗಿದೆ. ಇದ್ರಿಂದ ಮಾನಸಿಕ ನೆಮ್ಮದಿ ಹಾಳಾಗ್ತಿದೆ ಎಂಬ ಕಾರಣಕ್ಕೆ ಅವರು ಕೆಲಸ ಬಿಡ್ತಿದ್ದಾರೆ ಎನ್ನಲಾಗಿದೆ.