ಬೆಂಗಳೂರು: ಬಿಟ್ ಕಾಯಿನ್ ಹಗರಣವನ್ನು ಕಾಂಗ್ರೆಸ್ ನಾಯಕರು ಮುಚ್ಚಿಟ್ಟಿದ್ದರು. ಅದನ್ನು ಬಯಲಿಗೆಳೆದಿದ್ದೇ ಬಿಜೆಪಿ ಸರ್ಕಾರ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ನಾಯಕರು ಸುಳ್ಳಿನ ಸರದಾರರು ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಕಳೆದ ಬಾರಿ ರಫೇಲ್ ವಿಚಾರ ಪ್ರಸ್ತಾಪಿಸಿದರು. ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದರು. ಈಗ ಬಿಟ್ ಕಾಯಿನ್ ಹಗರಣ ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಮಾಡುತ್ತಿರುವ ಆರೋಪಗಳು ಸುಳ್ಳು. ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎನ್ನುವುದಕ್ಕೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ದಾಖಲೆ ಕೊಟ್ಟ 1 ಗಂಟೆಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸವಾಲು ಹಾಕಿದರು.
ಬಲು ದುಬಾರಿಯಾಯ್ತು ಮೊಲ ಸಾಕುವ ಈಕೆಯ ಹವ್ಯಾಸ
ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ 11 ಜನರ ವಿರುದ್ಧ ದೂರು ದಾಖಲಾಗಿತ್ತು. 2018ರಲ್ಲಿ ಮೊಹಮ್ಮದ್ ನಲಪಾಡ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆಗ ಕಾಂಗ್ರೆಸ್ ನಾಯಕರು ಶ್ರೀಕಿಯನ್ನು ಏಕೆ ಬಂಧಿಸಲಿಲ್ಲ? ಶ್ರೀಕಿ ಬಂಧಿಸದಂತೆ ಒತ್ತಡ ಹೇರಿದ್ದು ಯಾರು? 8 ತಿಂಗಳ ಕಾಲ ಶ್ರೀಕಿ ಇಲ್ಲಿಯೇ ಇದ್ದರೂ ಆತನನ್ನು ಏನೂ ಮಾಡಿಲ್ಲ ಯಾಕೆ? ಎಂದು ಪ್ರಶ್ನಿಸಿದರು.
4,500 ಕೋಟಿ ಬಿಟ್ ಕಾಯಿನ್ ವರ್ಗಾವಣೆ ಬಗ್ಗೆ ಸುರ್ಜೇವಾಲ ಆರೋಪಿಸಿದ್ದಾರೆ. ಅಲ್ಲದೇ ಶ್ರೀಕಿಯಿಂದ ವಶಪಡಿಸಿಕೊಳ್ಳಲಾಗಿದ್ದ ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂದೂ ಆರೋಪಿಸಿದ್ದಾರೆ. ಕಳ್ಳತನವಾಗಿದ್ದರೆ ಕಾಂಗ್ರೆಸ್ ನಾಯಕರು ದೂರು ಕೊಡಬೇಕು. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವ ಅಗತ್ಯವೇನು ಎಂದು ಕಿಡಿಕಾರಿದ್ದಾರೆ.
ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಹ್ಯಾಕರ್, ಬಿಟ್ ಕಾಯಿನ್ ಆರೋಪಿಯನ್ನು ಬಂಧಿಸಿದ್ದೇವೆ. ಆತನಿಗೆ ಜಾಮೀನು ಸಿಕ್ಕಿದೆ. ಆದರೆ ಪೊಲೀಸರು ಆತನ ಮೇಲೆ ನಿಗಾ ವಹಿಸಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಎಲ್ಲಾ ದಾಖಲೆಗಳನ್ನು ನಾವು ಕೋರ್ಟ್ ಗೆ ಸಲ್ಲಿಸಿದ್ದೇವೆ ಎಂದು ಹೇಳಿದರು.