ನವದೆಹಲಿ: ಆಸ್ಟ್ರೇಲಿಯಾ ಭಾನುವಾರ ಇತಿಹಾಸ ಸೃಷ್ಟಿಸಿದೆ. ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಟಿ20 ವಿಶ್ವ ಪ್ರಶಸ್ತಿ ಗೆದ್ದಿದೆ.
ಗೆಲುವಿನ ನಂತರ ಸಂಭ್ರಮಾಚರಣೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಆಸ್ಟ್ರೇಲಿಯಾ ತಂಡದ ಆಟಗಾರರು ಬೂಟ್ ನಲ್ಲಿ ಬಿಯರ್ ಕುಡಿದು ಸಂಭ್ರಮಿಸಿದ್ದಾರೆ. ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಶೂಗಳಲ್ಲಿ ಬಿಯರ್ ಕುಡಿಯುತ್ತಿರುವ ವಿಡಿಯೋವನ್ನು ಐಸಿಸಿ ಸೋಮವಾರ ಹಂಚಿಕೊಂಡಿದೆ.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸವಾಲಿನ ಮೊತ್ತವನ್ನೇ ನೀಡಿತ್ತು. ನಾಯಕ ಕೇನ್ ವಿಲಿಯಮ್ಸನ್ 48 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 85 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಬಳಿಕ ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮಿಚೆಲ್ ಮಾರ್ಷ್ 50 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 77 ರನ್ ಗಳಿಸಿ ಅಜೇಯರಾಗುಳಿದರು. ಡೇವಿಡ್ ವಾರ್ನರ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು.
ಇದಾದ ಬಳಿಕ ಆಸ್ಟ್ರೇಲಿಯಾ ಆಟಗಾರರು ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಶೂಗಳಲ್ಲಿ ಬಿಯರ್ ಕುಡಿಯುತ್ತಿರುವ ವಿಡಿಯೊವನ್ನು ಐಸಿಸಿ ಹಂಚಿಕೊಂಡಿದೆ. ವೇಡ್ ತನ್ನ ಶೂ ತೆಗೆದು ಅದರಲ್ಲಿ ಬಿಯರ್ ಸುರಿದು ನಂತರ ಕುಡಿದಿದ್ದಾರೆ. ಇದಾದ ಬಳಿಕ ಸ್ಟೊಯಿನಿಸ್ ಅದೇ ಶೂ ಹಿಡಿದು ಬಿಯರ್ ಕುಡಿಯುತ್ತಿರುವುದು ಕಂಡುಬಂದಿದೆ. ಕೇವಲ 20 ನಿಮಿಷದಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ಆಸ್ಟ್ರೇಲಿಯಾ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಟಿ20 ವಿಶ್ವ ಪ್ರಶಸ್ತಿ ಗೆದ್ದ ಆರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದಕ್ಕೂ ಮೊದಲು ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಇಂಗ್ಲೆಂಡ್ ಈ ಪ್ರಶಸ್ತಿ ಗಳಿಸಿವೆ. ಡೇವಿಡ್ ವಾರ್ನರ್ ಪಂದ್ಯಾವಳಿಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಅಂತಿಮ ಪಂದ್ಯದಲ್ಲಿ ಮಾರ್ಷ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
https://youtu.be/Gw2mKA3O2yA