ಗುಜರಾತ್ ನಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆಯಾಗಿದೆ. ಬರೋಬ್ಬರಿ 600 ಕೋಟಿ ರೂಪಾಯಿ ಮೌಲ್ಯದ ಡ್ರಗ್ ಜಪ್ತಿ ಮಾಡಲಾಗಿದೆ.
ಮೊರಬಿ ಜಿಲ್ಲೆಗೆ ಪಾಕಿಸ್ತಾನದಿಂದ ಗುಜರಾತ್ ಬಂದರಿಗೆ ಡ್ರಗ್ ತರಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. 600 ಕೋಟಿ ರೂಪಾಯಿ ಮೌಲ್ಯದ 120 ಕೆಜಿ ಹೆರಾಯಿನ್ ಜಪ್ತಿ ಮಾಡಲಾಗಿದೆ.
ಗುಜರಾತ್ ATS ನ ಪ್ರಮುಖ ಕಾರ್ಯಾಚರಣೆ ಇದಾಗಿದ್ದು, ಮೊರಬಿ ಜಿಂಜುಡಾ ಗ್ರಾಮದಲ್ಲಿ 600 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ. 3 ಆರೋಪಿಗಳನ್ನು ಬಂಧಿಸಿ ವಿಚಾರಣೆ ಆರಂಭಿಸಿದೆ. ಮಾಹಿತಿ ಪ್ರಕಾರ, ಮಧ್ಯರಾತ್ರಿ ಎಟಿಎಸ್ ಕಾರ್ಯಾಚರಣೆ ನಡೆಸಿದೆ. ಗ್ರಾಮದ ಎರಡು ಮನೆಗಳಲ್ಲಿ ತಪಾಸಣೆ ನಡೆಸಿದಾಗ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಗುಲಾಬ್ ಹುಸೇನ್, ಶಂಸುದ್ದೀನ್, ಮುಖ್ತಾರ್ ಹುಸೇನ್ ಅಲಿಯಾಸ್ ಜಬ್ಬಾರ್ ಬಂಧಿತರು ಎಂದು ಹೇಳಲಾಗಿದೆ. ಗುಲಾಬ್ ಹುಸೇನ್ ಜಾಮ್‌ನಗರದ ಸಾಲ್ಯಾ ನಿವಾಸಿಯಾಗಿದ್ದಾನೆ. ಮುಖ್ತಾರ್ ಜಬ್ಬಾರ್ ಜಾಮ್‌ನಗರದ ಜೋಡಿಯಾ ನಿವಾಸಿಯಾಗಿದ್ದು, ಇವರು ಪಾಕಿಸ್ತಾನದಿಂದ ಡ್ರಗ್ಸ್ ಆರ್ಡರ್ ಮಾಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕರಾವಳಿ ಪ್ರದೇಶಗಳಲ್ಲಿ ಪೊಲೀಸರ ದಾಳಿ ಹೆಚ್ಚಾಗುತ್ತಿದ್ದಂತೆ ಗ್ರಾಮದ ಮನೆಯೊಂದರಲ್ಲಿ ಡ್ರಗ್ಸ್ ಅಡಗಿಸಿಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಕುರಿತು ಕೇಂದ್ರ ಸಂಸ್ಥೆಗಳಿಗೆ ವರದಿ ಸಲ್ಲಿಸಲಾಗಿದೆ.
ಗುಜರಾತಿನಲ್ಲಿ ಕಳೆದ ಕೆಲ ದಿನಗಳಿಂದ ಡ್ರಗ್ಸ್ ವಶಪಡಿಸಿಕೊಳ್ಳುತ್ತಿರುವ ರೀತಿ ನೋಡಿದರೆ, ಗುಜರಾತ ದೇಶಕ್ಕೆ ಮಾದಕ ದ್ರವ್ಯ ಸಾಗಣೆಗೆ ಸುರಕ್ಷಿತ ಮಾರ್ಗವಾಗುತ್ತಿರುವಂತೆ ಕಾಣುತ್ತಿದೆ. ಮುಂದ್ರಾ, ದ್ವಾರಕಾ ನಂತರ ಮೊರಬಿಯಲ್ಲಿಯೂ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.