ಮನೆ ಕಟ್ಟುವ ಕನಸು ಕಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕಬ್ಬಿಣ, ಸಿಮೆಂಟ್ ಮತ್ತು ಇಟ್ಟಿಗೆ ದರ ದುಬಾರಿಯಾಗಿದೆ.
ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದೇ ಹೊತ್ತಲ್ಲಿ ನಿರ್ಮಾಣ ಸಾಮಗ್ರಿಗಳ ಬೆಲೆ ಕೂಡ ಭಾರಿ ಏರಿಕೆಯಾಗಿರುವುದು ಮನೆ ನಿರ್ಮಿಸುವವರಿಗೆ ನುಂಗಲಾರದ ತುತ್ತಾಗಿದೆ. ಕಟ್ಟಡ ಸಾಮಗ್ರಿಗಳ ಬೆಲೆ ದಿಡೀರ್ ಏರಿಕೆಯಾಗಿರುವುದು ಮನೆ ನಿರ್ಮಿಸುವವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಇಂಧನ ದರ ಏರಿಕೆ, ಸರಕು ಮತ್ತು ಸೇವಾ ತೆರಿಗೆ ಕಾರಣದಿಂದ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಸಿಮೆಂಟ್, ಮರಳು, ಕಬ್ಬಿಣ, ಇಟ್ಟಿಗೆ, ಎಂಸ್ಯಾಂಡ್ ದರ ಒಂದು ವರ್ಷದ ಅವಧಿಯಲ್ಲಿ ಶೇಕಡ 40 ರಿಂದ 50 ರಷ್ಟು ಹೆಚ್ಚಳವಾಗಿದೆ.
ಸಾಮಾನ್ಯ ದರ್ಜೆಯ 10 ಚದರ ಅಡಿ ಮನೆ ನಿರ್ಮಾಣಕ್ಕೆ ನಿರ್ಮಾಣ ವೆಚ್ಚ 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗಿಂತಲೂ ಹೆಚ್ಚಾಗಿದೆ. ಟೈಲ್ಸ್, ಸ್ಯಾನಿಟರಿ, ಮರ ಮೊದಲಾದವುಗಳ ವೆಚ್ಚ ಕೂಡ ಏರಿಕೆಯಾಗಿದೆ. ಕೊರೋನಾಗಿಂತಲೂ ಮೊದಲೇ ಇದ್ದ ದರ ಮತ್ತು ಈಗಿನ ದರಕ್ಕೆ ಅಜಗಜಾಂತರ ವ್ಯತ್ಯಾಸವಾಗಿದೆ.
ಕೊರೊನಾ ಪೂರ್ವದಲ್ಲಿ ಒಂದು ಟನ್ ಗೆ 54 ಸಾವಿರ ರೂಪಾಯಿ ಇದ್ದ ಕಬ್ಬಿಣ ದರ ಈಗ 68 ರಿಂದ 78 ಸಾವಿರ ರೂ. ತಲುಪಿದೆ. ಸಿಮೆಂಟ್ ದರ 270 ರೂ.ನಿಂದ 480 ರಿಂದ 550 ರೂ. ಗೆ ತಲುಪಿದೆ. ಎಂ ಸ್ಯಾಂಡ್ ದರ 1700 ನಿಂದ 2500 ರೂ.ಗೆ ಏರಿಕೆಯಾಗಿದೆ. ಅದೇ ರೀತಿ ಇಟ್ಟಿಗೆ ದರ ಕೂಡ ಏರಿಕೆಯಾಗಿದೆ.
ನಿರ್ಮಾಣ ಸಾಮಗ್ರಿಗಳು, ಒಳಾಂಗಣಕ್ಕೆ ಬಳಸುವ ವಸ್ತುಗಳ ದರ ಕೂಡ ಏರಿಕೆಯಾಗಿದೆ. ಇದರೊಂದಿಗೆ ಜಿಎಸ್ಟಿ ಹೊರೆಯೂ ಹೆಚ್ಚಾಗುತ್ತಿದ್ದು, ನಿರ್ಮಾಣ ವಲಯಕ್ಕೆ ಹೊರೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.