ನ್ಯೂಯಾರ್ಕ್: ಟ್ರಾಫಿಕ್ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಜನರು ಏನೆಲ್ಲಾ ಉಪಾಯ ಮಾಡುತ್ತಾರೆ ಎಂಬ ಬಗ್ಗೆ ಕೇಳಿದ್ರೆ ಖಂಡಿತಾ ಅಚ್ಚರಿಪಡುತ್ತೀರಿ..! ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಒಂದಕ್ಕಿಂತ ಹೆಚ್ಚಿನ ಜನರಿಗಾಗಿ ಇರುವ ಲೇನ್ ನಲ್ಲಿ ಕಾರು ಚಾಲಕ ಪ್ರಯಾಣಿಸಿದ್ದಾನೆ. ಏನೋ ಎಡವಟ್ಟಾಗಿದೆ ಎಂದು ಕಾರನ್ನು ತಡೆದು ನಿಲ್ಲಿಸಿದ ಟ್ರಾಫಿಕ್ ಪೊಲೀಸ್ ದಂಗಾಗಿದ್ದಾರೆ.
ಸಫೊಲ್ಕ್ ಕೌಂಟಿ ಪೊಲೀಸ್ ಇಲಾಖೆಯು ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಹಂಚಿಕೊಂಡಿದೆ. ಟ್ರಾಫಿಕ್ ದಟ್ಟಣೆ ಇದ್ದಿದ್ದರಿಂದ ಕಾರು ಚಾಲಕ ತನ್ನ ಪಕ್ಕದ ಸೀಟಿನ ಹಿಂಭಾಗವನ್ನು ಪ್ರಯಾಣಿಕರಂತೆ ಕಾಣಲು ಜಾಕೆಟ್ ಅನ್ನು ತೊಡಿಸಿ, ಹೆಚ್ಒವಿ ಲೇನ್ನಲ್ಲಿ ಪ್ರಯಾಣಿಸಿದ್ದಾನೆ. ಇದು ಚಾಲಕ ಮತ್ತು ಒಂದು ಅಥವಾ ಹೆಚ್ಚಿನ ಪ್ರಯಾಣಿಕರನ್ನು ಹೊಂದಿರುವ ವಾಹನಗಳ ವಿಶೇಷ ಬಳಕೆಗಾಗಿ ಕಾಯ್ದಿರಿಸಲಾಗಿದೆ.
ಗುರುವಾರ ಬೆಳಗ್ಗೆ 9 ಗಂಟೆಗೆ ಲಾಂಗ್ ಐಲ್ಯಾಂಡ್ ಎಕ್ಸ್ಪ್ರೆಸ್ವೇಯಲ್ಲಿ ಜಾಕೆಟ್ ಮತ್ತು ಟೋಪಿ ಧರಿಸಿದ್ದನ್ನು ನೋಡಿದ ಟ್ರಾಫಿಕ್ ಪೊಲೀಸ್ ಗೆ ಏನೋ ಸರಿಯಿಲ್ಲ ಎಂಬ ಅನುಮಾನ ಮೂಡಿದೆ. ಕೂಡಲೇ ಅಧಿಕಾರಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರನ್ನು ಪರಿಶೀಲಿಸಿದ ಅಧಿಕಾರಿ ಅವಾಕ್ಕಾಗಿದ್ದಾರೆ. ಇನ್ನು ಹೆಚ್ಒವಿ ಲೇನ್ ನಲ್ಲಿ ಪ್ರಯಾಣಿಸಿದ್ದಕ್ಕಾಗಿ ಕಾರು ಚಾಲಕನಿಗೆ ದಂಡ ವಿಧಿಸಲಾಗಿದೆ.