ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತರಾದ ಶಾರುಖ್ ಖಾನ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ ಕಳೆದ ತಿಂಗಳು ಪೂರ್ತಿ ಡ್ರಗ್ಸ್ ಸೇವನೆ ಕೇಸ್‌ನಲ್ಲಿ ಸುದ್ದಿಯಲ್ಲಿದ್ದರು.
ಆ ವೇಳೆ ಆರ್ಯನ್ ಜತೆಗೆ ಸೆಲ್ಫಿ ಹಂಚಿಕೊಂಡಿದ್ದ ಖಾಸಗಿ ಪತ್ತೆದಾರ ಕಿರಣ್ ಗೋಸಾವಿ ಎಂಬಾತ ಕೂಡ ಸ್ವಲ್ಪ ತಡವಾಗಿ ಚರ್ಚೆಗೆ ಸಿಕ್ಕಿಬಿದ್ದಿದ್ದರು. ಆರ್ಯನ್ ವಿರುದ್ಧ ಎನ್‌ಸಿಬಿ ಅಧಿಕಾರಿಗಳ ಕಡೆಯಿಂದ ಸಾಕ್ಷಿಯಾಗಿರುವ ಕಿರಣ್ ವಿರುದ್ಧ ಶಾರುಖ್ ಕುಟುಂಬದಿಂದ ಹಣ ವಸೂಲಿ ಯತ್ನ ಹಾಗೂ ಆರ್ಯನ್ ಬಿಡುಗಡೆಗೆ ಬೆದರಿಕೆ ಹಾಕಿದ ಆರೋಪ ಕೂಡ ಇದೆ.
ಆದರೆ ಇಂಥ ಆಸಾಮಿಗೆ ಪುಣೆಯ ಮಹಿಳೆಯೊಬ್ಬಳು ಯಾಮಾರಿಸಿದ್ದಾಳೆ. ಕುಸುಮ್ ಗಾಯಕ್ವಾಡ್ ಎಂಬ ಈ ವಂಚಕಿ ಸದ್ಯ ಪುಣೆ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿ ಇದ್ದಾಳೆ. 2020 ರಲ್ಲಿ ಕುಸುಮ್ ವಿರುದ್ಧ ದಾಖಲಾಗಿದ್ದ ಚೀಟಿಂಗ್ ಪ್ರಕರಣ ಸಂಬಂಧ ಸದ್ಯ ಆಕೆಯನ್ನು ಬಂಧಿಸಲಾಗಿದೆ.
ಕಂಗನಾಗೆ ಸಂಗೀತ ನಿರ್ದೇಶಕ ವಿಶಾಲ್ ಖಡಕ್ ತಿರುಗೇಟು
2020 ರಲ್ಲಿ ಕೆಲಸದ ಆಮಿಷವೊಡ್ಡಿ, ನಿರುದ್ಯೋಗಿಗಳನ್ನು ಮತ್ತು ಯುವಕರನ್ನು ಕುಸುಮ್ ಗಾಯಕ್ವಾಡ್ ಸೆಳೆಯುತ್ತಿದ್ದಳು. ಭಾರಿ ಹಣ ಪಡೆದು ಕೆಲಸ ಕೊಡಿಸುವ ಭರವಸೆ ನೀಡಿ ಮೋಸ ಮಾಡುತ್ತಿದ್ದಳು ಎನ್ನಲಾಗಿದೆ. ದಾಖಲಾಗಿರುವ ಪ್ರಕರಣ ಸಂಬಂಧ ಕುಸುಮ್ 4.05 ಲಕ್ಷ ರೂ. ವಂಚನೆ ಮಾಡಿದ್ದಾಳೆ. ಆ ಪೈಕಿ 1.30 ಲಕ್ಷ ರೂ. ಆರ್ಯನ್ ವಿರುದ್ಧದ ಸಾಕ್ಷಿ ಗೋಸಾವಿಯ ಖಾತೆಗೆ ಜಮೆಯಾಗಿದೆ.
ಮಲೇಷ್ಯಾದಲ್ಲಿ ಕೆಲಸ ಕೊಡಿಸುವುದಾಗಿ ಮೂವರಿಗೆ ಕುಸುಮ್ ಯಾಮಾರಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ನಡುವೆ ಗೋಸಾವಿಗೆ ತಿಳಿಯದಂತೆ ಹೆಚ್ಚು ಹಣ ಕೂಡ ವಸೂಲಿ ಮಾಡಿಕೊಂಡಿರುವ ಕುಸುಮ್, ಗೋಸಾವಿ ಖಾತೆಗೆ ಬಿಡಿಗಾಸು ಮಾತ್ರ ಹಾಕಿರುವ ಚಾಲಾಕಿ ಎಂದು ಪುಣೆ ಪೊಲೀಸರು ಪತ್ತೆ ಮಾಡಿದ್ದಾರೆ.
ಇನ್ನೊಂದೆಡೆ, ಬ್ರೂನಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ತನ್ನಿಂದ 2.25 ಲಕ್ಷ ರೂ.ಗಳನ್ನು ಗೋಸಾವಿ ವಸೂಲಿ ಮಾಡಿಕೊಂಡಿದ್ದಾನೆ ಎಂದು ಲಾತೂರ್ ನಿವಾಸಿಯೊಬ್ಬರು ಭೊಸಾರಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಇದರ ತನಿಖೆ ಕೂಡ ನಡೆಸಲಾಗುತ್ತಿದೆ. ಸದ್ಯಕ್ಕೆ ಗೋಸಾವಿಯು ನ.17ರವರೆಗೆ ಪೊಲೀಸರ ವಶದಲ್ಲಿದ್ದಾನೆ.