1947ರಲ್ಲಿ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ’ಭಿಕ್ಷೆ’ಯ ರೂಪದಲ್ಲಿ ದಕ್ಕಿದ್ದು. ನೈಜ ಸ್ವಾತಂತ್ರ್ಯಹೋರಾಟದ ಮೂಲಕ ಗಿಟ್ಟಿಸಿಕೊಳ್ಳಲಾಗಿದ್ದು 2014ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಚನೆಯಾದ ಮೇಲೆ ಎಂದು ಬಾಲಿವುಡ್ನ ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಬಾಯಿಗೆ ಬಂದಂತೆ ಮಾತನಾಡಿ ವಿವಾದ ಎಬ್ಬಿಸುವ ನಟಿಯನ್ನು ಈಗಾಗಲೇ ಸಾಮಾಜಿಕ ಜಾಲತಾಣವಾದ ಟ್ವಿಟರ್ನಿಂದ ಹೊರದಬ್ಬಲಾಗಿದೆ. ಹಾಗಿದ್ದೂ, ಅವಕಾಶ ಸಿಕ್ಕಾಗೆಲ್ಲ ಮಾಧ್ಯಮಗಳ ಎದುರು ವಿವಾದ ಹೇಳಿಕೆಗಳನ್ನೇ ನೀಡುತ್ತಾ ತಮ್ಮ ಸುತ್ತಲ ಜನರ ಗಮನ ಸೆಳೆಯುವ ತಂತ್ರವನ್ನು ಕಂಗನಾ ರೂಢಿಸಿಕೊಂಡು ಬಂದುಬಿಟ್ಟಿದ್ದಾರೆ ಎನ್ನುವುದು ಬಾಲಿವುಡ್ನ ಇತರ ನಟ-ನಟಿಯರ ಆರೋಪ.
ಸ್ವಾತಂತ್ರ್ಯದ ಬಗ್ಗೆ ಹಗುರವಾಗಿ ಮಾತನಾಡಿದ ಕಂಗನಾಗೆ ಕಾಂಗ್ರೆಸ್ ನಾಯಕರು ಈಗಾಗಲೇ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆದರೆ, ಸಂಗೀತ ನಿರ್ದೇಶಕ ವಿಶಾಲ್ ದಡ್ಲಾನಿ ಕೊಟ್ಟಿರುವ ತಿರುಗೇಟು ಭಾರಿ ಚರ್ಚೆಯಲ್ಲಿದೆ.
ಅವರು ಭಗತ್ ಸಿಂಗ್ ಅವರ ಫೋಟೊ ಇರುವ ಶರ್ಟ್ವೊಂದನ್ನು ಧರಿಸಿದ್ದಾರೆ. ಬಳಿಕ ಇನ್ಸ್ಟಾಗ್ರಾಮ್ನಲ್ಲಿನ ತಮ್ಮ ಖಾತೆಯಲ್ಲಿ ಫೋಟೊ ಜತೆಗೆ ಖಡಕ್ ಪೋಸ್ಟ್ ಹಾಕಿದ್ದಾರೆ.
ಶ್ರೀರಾಮಸೇನೆ ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ
’’ 23ನೇ ವಯಸ್ಸಿಗೆ ಸ್ವಾತಂತ್ರ್ಯಕ್ಕಾಗಿ ತನ್ನ ಜೀವ ತ್ಯಾಗ ಮಾಡಿದ ಭಾರತದ ಹೆಮ್ಮೆಯ ಮಗನ ಫೋಟೊ ಶರ್ಟ್ ಮೇಲೆ ಧರಿಸಿದ್ದೇನೆ. ರೈತನ ಮಗ ಈತ, ಶಹೀದ್ ಸರ್ದಾರ್ ಭಗತ್ ಸಿಂಗ್ ಎಂದು ಹೆಸರು. ಅದೇ ರೀತಿ ಸುಖದೇವ್, ರಾಜ್ಗುರು, ಅಶ್ಫಾಖುಲ್ಲಾ ಕೂಡ ಸ್ವಾತಂತ್ರ್ಯಕ್ಕಾಗಿ ಮಡಿದವರು. ಇವರು ಯಾರೂ ಕೂಡ ನೀವು ಹೇಳಿದಂತೆ ಸ್ವಾತಂತ್ರ್ಯಕ್ಕಾಗಿ ’ಭಿಕ್ಷೆ’ ಬೇಡಲಿಲ್ಲ. ಕಂಗನಾ ಎಂಬ ನಟಿಯು ಈ ಮಾಹಿತಿಗಳನ್ನು ಮರೆಯದಂತೆ ಆಕೆಗೆ ಗಟ್ಟಿಯಾಗಿ ಜ್ಞಾಪಿಸುತ್ತಿರಿ,’’ ಎಂದು ಬರೆದಿದ್ದಾರೆ. ಜತೆಗೆ ತಮ್ಮ ಪೋಸ್ಟ್ಗೆ ’ಜಿಂದಾಬಾದ್’ ಎಂದು ಶೀರ್ಷಿಕೆ ನೀಡಿ ಇನ್ಸ್ಟಾಗ್ರಾಂನಲ್ಲಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.