ಜೋಧಪುರ್: ಏವಿಯನ್ ಇನ್ಫ್ಲುಯೆಂಜದಿಂದ ರಾಜಸ್ಥಾನದಲ್ಲಿ 189 ಪಕ್ಷಿಗಳು ಸತ್ತಿವೆ. ಸಾಂಕ್ರಾಮಿಕ ಮತ್ತು ತೀವ್ರವಾದ ಉಸಿರಾಟ ತೊಂದರೆ ಕಾಯಿಲೆ ತರುವ ಬರ್ಡ್ ಫ್ಲೂ H5N1 ಇನ್ಫ್ಲುಯೆಂಜ ವೈರಸ್‌ನಿಂದ ಉಂಟಾಗುತ್ತದೆ. ಇದು ಸಾಂದರ್ಭಿಕವಾಗಿ ಮನುಷ್ಯರಿಗೂ ಸೋಂಕು ತರುತ್ತದೆ.
ಜೋಧ್‌ಪುರದ ವಿಭಾಗೀಯ ಅರಣ್ಯಾಧಿಕಾರಿ(ಡಿಎಫ್‌ಒ) ರಮೇಶ್ ಕುಮಾರ್ ಮಲ್ಪಾನಿ ಅವರು, ಭಾನುವಾರ ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಕಪರ್ದಾ ಗ್ರಾಮದಲ್ಲಿ ಒಟ್ಟು 56 ಪಕ್ಷಿಗಳು ಸಾವನ್ನಪ್ಪಿವೆ. ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾದರಿಗಳ ಮೂಲಕ ಏವಿಯನ್ ಇನ್ಫ್ಲುಯೆಂಜ ಪತ್ತೆಯಾಗಿದ್ದು, ಪ್ರೋಟೋಕಾಲ್ ಪ್ರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ ಒಟ್ಟು 189 ಪಕ್ಷಿಗಳು ಸಾವನ್ನಪ್ಪಿವೆ. ಈ ತಿಂಗಳ ಆರಂಭದಲ್ಲಿ, ಕಪರ್ದಾ ಗ್ರಾಮದಲ್ಲಿ ಸುಮಾರು 80 ವಲಸೆ ಹಕ್ಕಿಗಳು ಸತ್ತವು. ವಲಸೆ ಹಕ್ಕಿಗಳ ಶವಗಳನ್ನು ಮೊದಲು ಸ್ಥಳೀಯ ವನ್ಯಜೀವಿ ಕಾರ್ಯಕರ್ತ ಭಜನ್ ಲಾಲ್ ನಾಯ್ನ್ ಅವರು ಕಂಡು ವನ್ಯಜೀವಿ ಇಲಾಖೆ ಮತ್ತು ಇತರ ವನ್ಯಜೀವಿ ಕಾರ್ಯಕರ್ತರಿಗೆ ತಿಳಿಸಿದ್ದರು. ನಂತರ ಅರಣ್ಯ ಇಲಾಖೆ ತಂಡವನ್ನು ಸ್ಥಳಕ್ಕೆ ಕಳುಹಿಸಿ ಪರೀಕ್ಷಿಸಲಾಗಿತ್ತು.