ಹುಲಿ, ಸಿಂಹಗಳ ಹೆಸರು ಕೇಳಿದ್ರೆ ಸಾಕು ಭಯವಾಗುತ್ತೆ. ಅಂತದ್ರಲ್ಲಿ ನ್ಯೂಯಾರ್ಕ್ನ ಬ್ರಾಂಕ್ಸ್ ಮೃಗಾಲಯದಲ್ಲಿ ಮಹಿಳೆಯೊಬ್ಬಳು ತಡೆಗೋಡೆಯನ್ನು ಹತ್ತಿ ಸಿಂಹದ ಹತ್ತಿರ ತೆರಳಿದ್ದಾಳೆ. ಮಾತ್ರವಲ್ಲದೇ ಗುಲಾಬಿಯನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡುತ್ತಾ ಸಿಂಹದ ಮೇಲೆ ಹಣವನ್ನು ಎಸೆದಿದ್ದಾಳೆ.
ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿದ ಮಹಿಳೆ ಸಿಂಹದ ಬಳಿ ತೆರಳಿ ಈ ರೀತಿ ಹೂವು ಹಾಗೂ ಹಣವನ್ನು ಹಿಡಿದು ಸಿಂಹದ ಬಳಿ ಮಾಡಿದ ವಿಚಿತ್ರ ವರ್ತನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಆಕೆ, ನಾನು ಈತನನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇನೆ ಎಂದು ಹೇಳುತ್ತಿರೋದನ್ನು ಕೇಳಬಹುದಾಗಿದೆ.
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ಈ ಮಹಿಳೆ ಸಿಂಹವನ್ನು ತನ್ನ ಹಳೆಯ ಸ್ನೇಹಿತ ಎಂಬಂತೆ ಮಾತನಾಡಿಸುತ್ತಿದ್ದಳಂತೆ. ಕಿಂಗ್, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಿನಗಾಗಿ ಮರಳಿ ಬಂದಿದ್ದೇನೆ ಎಂದೆಲ್ಲ ಸಿಂಹದ ಬಳಿ ಕೂಗಿದ್ದಾಳೆ ಎನ್ನಲಾಗಿದೆ.
ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮೃಗಾಲಯದ ವಕ್ತಾರ, ವೀಕ್ಷಕರು ಮೃಗಾಲಯದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆಕೆ ಅಲ್ಲಿಂದ ಕಾಲ್ಕಿತ್ತಿದ್ದಳು ಎಂದಿದ್ದಾರೆ.