ಭುವನೇಶ್ವರದ ಪೋಖಾರಿಪುಟ್ ಪ್ರದೇಶದ ಶೌಚಾಲಯದಲ್ಲಿದ್ದ 4 ಅಡಿ ಉದ್ದದ ನಾಗರಹಾವನ್ನು ರಕ್ಷಿಸಲಾಗಿದೆ.
ವಿಷಕಾರಿ ಸರೀಸೃಪವು ವಸತಿ ಗೃಹದಲ್ಲಿನ ಸ್ನಾನಗೃಹದೊಳಗೆ ಕಂಡು ಬಂದಿತ್ತು.
ಶೌಚಾಲಯದಲ್ಲಿದ್ದ ಹಾವನ್ನು ನೋಡಿದ ಅಜಯ್ ಮುಖರ್ಜಿ ಎಂಬುವವರು ಭಯದಿಂದ ಕಿರುಚಿದ್ದಾರೆ. ಇವರ ಕಿರುಚಾಟವನ್ನು ಕೇಳಿದ ಪತ್ನಿ ದೀಪ್ತಿಮಯಿ ಮುಖರ್ಜಿ ಏನಾಯಿತೆಂದು ನೋಡಲು ಬಂದಾಗ, ನಾಗರಹಾವು ಇರುವುದನ್ನು ಗಮನಿಸಿದ್ದಾರೆ. ಅವರು ಕೂಡಲೇ ಸರೀಸೃಪಗಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ರಕ್ಷಣಾ ತಂಡದ ಸದಸ್ಯರು ಸ್ಥಳಕ್ಕಾಗಮಿಸಿದ್ದಾರೆ. ಈ ವೇಳೆ ಸರೀಸೃಪವು ಬಾತ್‍ರೂಮ್‍ನಿಂದ ಹೊರ ಹೋಗುವ ನೀರಿನ ಉಕ್ಕಿನ ಜಾಲರಿಯೊಳಗೆ ಸಿಕ್ಕಿಹಾಕಿಕೊಂಡಿತ್ತು. ಕೂಡಲೇ ರಕ್ಷಣಾ ತಂಡದ ಸದಸ್ಯರು ಯಾವುದೇ ಹಾನಿಯಾಗದಂತೆ ಹಾವನ್ನು ಉಕ್ಕಿನ ಪೈಪ್ ಸಮೇತ ಹಿಡಿದು ಮನೆಯಿಂದ ಹೊರಗೆ ಒಯ್ದಿದ್ದಾರೆ. ಪೈಪ್ ಒಳಗೆ ಸಿಕ್ಕಿಹಾಕಿಕೊಂಡಿದ್ದ ಹಾವನ್ನು ಕಚೇರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಮುಕ್ತಗೊಳಿಸಲಾಯಿತು.
ನಂತರ ನಾಗರಹಾವನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದ್ದು, ಯಾವುದೇ ಬಾಹ್ಯ ಗಾಯಗಳಿಲ್ಲದಿರುವುದು ಕಂಡು ಬಂದ ನಂತರ ಅದನ್ನು ನಗರದ ಹೊರಗಿನ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಯಿತು.
ಈ ಹಿಂದೆ ಭುವನೇಶ್ವರದಲ್ಲಿರುವ ಗೋಪಬಂಧು ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನ ಹಾಸ್ಟೆಲ್‌ನ ಅಡುಗೆ ಕೋಣೆಯಿಂದ ನಾಗರಹಾವನ್ನು ರಕ್ಷಿಸಲಾಗಿತ್ತು.