ಈಗ ಮನೆ ಮನೆಗೂ ಗ್ಯಾಸ್ ಸಿಲಿಂಡರ್ ಬಂದಿದೆ. ಆದ್ರೆ ಗ್ಯಾಸ್ ಸಿಲಿಂಡರ್ ಅಪಾಯಕಾರಿ. ಸಣ್ಣ ತಪ್ಪು ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಸಿಲಿಂಡರ್ ಬಳಸುವಾಗ ಯಾವ ತಪ್ಪುಗಳನ್ನೂ ಮಾಡಬಾರದು. ಒಂದು ವೇಳೆ ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ ಅಥವಾ ಅನಿಲ ಸೋರಿಕೆಯಿಂದ ಅಪಘಾತ ಸಂಭವಿಸಿದರೆ, ಗ್ರಾಹಕರಿಗೆ ಕಂಪನಿ ವಿಮೆ ನೀಡುತ್ತದೆ.
ಎಲ್.ಪಿ.ಜಿ. ಸಿಲಿಂಡರ್ ಖರೀದಿ ವೇಳೆ ಪೆಟ್ರೋಲಿಯಂ ಕಂಪನಿಗಳು ಗ್ರಾಹಕರಿಗೆ ವೈಯಕ್ತಿಕ ಅಪಘಾತ ರಕ್ಷಣೆಯನ್ನು ಒದಗಿಸುತ್ತವೆ. 50 ಲಕ್ಷದವರೆಗಿನ ಈ ವಿಮೆಯನ್ನು ಗ್ಯಾಸ್ ಸೋರಿಕೆ ಅಥವಾ ಎಲ್.ಪಿ.ಜಿ. ಸಿಲಿಂಡರ್ನಿಂದ ಸ್ಫೋಟಗೊಂಡು ಅಪಘಾತ ಸಂಭವಿಸಿದಾಗ ನೀಡಲಾಗುತ್ತದೆ. ಈ ವಿಮೆಗಾಗಿ, ಪೆಟ್ರೋಲಿಯಂ ಕಂಪನಿಗಳು ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ.
ಸಿಲಿಂಡರ್ ಸ್ಫೋಟ ಅಥವಾ ಸೋರಿಕೆಯಲ್ಲಿ ಗ್ರಾಹಕರ ಆಸ್ತಿ/ಮನೆಗೆ ಹಾನಿಯಾದರೆ ಪ್ರತಿ ಅಪಘಾತಕ್ಕೆ 2 ಲಕ್ಷದವರೆಗೆ ವಿಮೆ ನೀಡಲಾಗುವುದು. ಅಪಘಾತದ ನಂತರ ವಿಮೆ ಮೊತ್ತವನ್ನು ಹೇಗೆ ತೆಗೆದುಕೊಳ್ಳಬೇಕೆಂಬ ವಿಧಾನವನ್ನು ಅಧಿಕೃತ ವೆಬ್ಸೈಟ್ http://mylpg.in ನಲ್ಲಿ ನೀಡಲಾಗಿದೆ.
ವೆಬ್ಸೈಟ್ ಪ್ರಕಾರ, ಅಪಘಾತದಲ್ಲಿ ಗರಿಷ್ಠ 50 ಲಕ್ಷದವರೆಗೆ ಪರಿಹಾರವನ್ನು ಪಡೆಯಬಹುದು. ಅಪಘಾತದಲ್ಲಿ ಗಾಯಗೊಂಡ ಪ್ರತಿಯೊಬ್ಬರಿಗೂ ಗರಿಷ್ಠ 10 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಎಲ್.ಪಿ.ಜಿ. ಸಿಲಿಂಡರ್ನ ವಿಮಾ ರಕ್ಷಣೆಯನ್ನು ಪಡೆಯಲು, ಗ್ರಾಹಕರು ಅಪಘಾತದ ಬಗ್ಗೆ ತಕ್ಷಣ ಹತ್ತಿರದ ಪೊಲೀಸ್ ಠಾಣೆ ಮತ್ತು ಎಲ್.ಪಿ.ಜಿ. ವಿತರಕರಿಗೆ ತಿಳಿಸಬೇಕು.
ಇಂಡಿಯನ್ ಆಯಿಲ್, ಎಚ್ ಪಿ ಸಿ ಎಲ್ ಮತ್ತು ಬಿಪಿಸಿ ನಂತಹ ಪಿಎಸ್ಯು ತೈಲ ಮಾರುಕಟ್ಟೆ ಕಂಪನಿಗಳ ವಿತರಕರು ಅಪಘಾತಗಳಿಗೆ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇವುಗಳು ಯಾವುದೇ ವೈಯಕ್ತಿಕ ಗ್ರಾಹಕರ ಹೆಸರಿನಲ್ಲಿರುವುದಿಲ್ಲ. ಆದರೆ ಪ್ರತಿಯೊಬ್ಬ ಗ್ರಾಹಕರು ಈ ಪಾಲಿಸಿಯಲ್ಲಿ ಬರುತ್ತಾರೆ. ಆದ್ರೆ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ.
ಗಾಯಗೊಂಡವರ ಎಫ್ಐಆರ್, ವೈದ್ಯಕೀಯ ಬಿಲ್ಗಳು ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಬೇಕಾಗುತ್ತದೆ. ಪೊಲೀಸ್ ದೂರಿನ ನಂತ್ರ ಕಾರಣವೇನು ಎಂಬುದನ್ನು ಸಂಬಂಧಿಸಿದ ಪ್ರದೇಶ ಕಚೇರಿ ತನಿಖೆ ನಡೆಸುತ್ತದೆ. ಎಲ್.ಪಿ.ಜಿ.ಯಿಂದಲೇ ಅಪಘಾತವಾಗಿದ್ದರೆ, ವಿತರಕ ಸಂಸ್ಥೆ ಅಥವಾ ಪ್ರದೇಶ ಕಚೇರಿಯು ವಿಮಾ ಕಂಪನಿಯ ಸ್ಥಳೀಯ ಕಚೇರಿಗೆ ಅದರ ಬಗ್ಗೆ ಮಾಹಿತಿ ನೀಡುತ್ತದೆ. ಇದರ ನಂತರ ಹಣವನ್ನು ಸಂಬಂಧಪಟ್ಟ ವಿಮಾ ಕಂಪನಿ ನೀಡುತ್ತದೆ.