ರಾಜ್‌ಗಢ: ಭಾರತೀಯ ವಿವಾಹವು ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಏಕೆಂದರೆ ಇಲ್ಲಿನ ಮದುವೆಗಳಲ್ಲಿ ನಾಟಕ, ಸಸ್ಪೆನ್ಸ್ ಮತ್ತು ದುರಂತ ಎಲ್ಲಾ ಕೂಡ ಇವೆ. ಮದುವೆಯ ದಿನದಂದು ಮಂಟಪದಲ್ಲೇ ವಧು ಅಥವಾ ವರ ಮದುವೆಯನ್ನು ನಿರಾಕರಿಸಿರುವ ಹಲವಾರು ಘಟನೆಗಳು ನಡೆದಿವೆ. ಇದೀಗ ಮಧ್ಯಪ್ರದೇಶದ ರಾಜ್‌ಗಢದಲ್ಲಿ ಕೂಡ ಇಂಥದ್ದೇ ಒಂದು ಘಟನೆ ನಡೆದಿದೆ.
ನವೆಂಬರ್ 7 ರಂದು ರಾಜ್‌ಗಢ್ ಜಿಲ್ಲೆಯ ಸುಥಾಲಿಯಾದಲ್ಲಿ ಮದುವೆಯ ಸಿದ್ಧತೆಗಳು ನಡೆಯುತ್ತಿದ್ದವು. ಮದುವೆಯ ಮೆರವಣಿಗೆ ವಿವಾಹದ ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ವರ ಮತ್ತು ಆತನ ಸ್ನೇಹಿತರು ಸೇರಿದಂತೆ ಅನೇಕ ಅತಿಥಿಗಳು ಕುಡಿದಿದ್ದರು.
ವರ ಎಷ್ಟು ಕುಡಿದಿದ್ದನೆಂದರೆ ಅವನಿಗೆ ತಾನಾಗೇ ಎದ್ದು ನಿಲ್ಲುವ ಸ್ಥಿತಿಯಲ್ಲಿ ಆತ ಇರಲಿಲ್ಲ. ಈ ದೃಶ್ಯ ಕಂಡ ವಧು ಅವಕ್ಕಾಗಿದ್ದಾಳೆ. ಅಲ್ಲದೆ ಮದುವೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾಳೆ. ತನ್ನ ಈ ನಿರ್ಧಾರವನ್ನು ಮನೆಯವರ ಬಳಿಯೂ ತಿಳಿಸಿದ್ದಾಳೆ. ಕುಡಿದು ಬಂದವನನ್ನು ಮಾತ್ರ ತಾನು ಮದುವೆಯಾಗಲಾರೆ ಎಂದಿದ್ದಾಳೆ. ಇದಕ್ಕೆ ಆಕೆಯ ಕುಟುಂಬವೂ ಒಪ್ಪಿಗೆ ಸೂಚಿಸಿದೆ.
ಕಳೆದ ವರ್ಷವೂ ಇಂತಹ ಹಲವಾರು ಘಟನೆಗಳು ಸುದ್ದಿಯಾಗಿದ್ದವು. ಅಂತಹ ಒಂದು ಘಟನೆಯಲ್ಲಿ, ವರನ ಕಡೆಯವರು ತಮ್ಮ ಸಂಭ್ರಮಾಚರಣೆ ವೇಳೆ ಗುಂಡು ಹಾರಿಸಿದ್ದರಿಂದ ವಧು ಮದುವೆಯನ್ನು ರದ್ದುಗೊಳಿಸಿದ್ದಳು. ಇನ್ನೊಂದು ಘಟನೆಯಲ್ಲಿ, ವರನಿಗೆ ಸರಿಯಾಗಿ ಉರ್ದು ಪದಗಳನ್ನು ಉಚ್ಛರಿಸಲು ಬರುವುದಿಲ್ಲವೆಂದು ವಧು ವಿವಾಹವನ್ನು ರದ್ದುಗೊಳಿಸಿದ್ದಳು.