ಚೆನ್ನೈ: ಇಡೀ ದೇಶದ ಗಮನ ಸೆಳೆದಿದ್ದ ಮತ್ತು ಜನರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದ ಘಟನೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ರಕ್ಷಣೆ ಮಾಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚೆನ್ನೈ ಮಹಾನಗರದ ಟಿ.ಪಿ. ಛಾರಾಮನ್ ಠಾಣೆಯ ಇನ್ಸ್ ಪೆಕ್ಟರ್ ರಾಜೇಶ್ವರಿ ಸ್ಮಶಾನದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 25 ವರ್ಷದ ಉದಯಕುಮಾರ್ ಎಂಬುವನನ್ನು ರಕ್ಷಿಸಿದ್ದರು. ತಮ್ಮ ಹೆಗಲಮೇಲೆ ಹೊತ್ತುಕೊಂಡು ಆಟೋರಿಕ್ಷಾ ಬಳಿಗೆ ರಾಜೇಶ್ವರಿ ಧಾವಿಸಿ ಬಂದು ಆತನನ್ನು ರಕ್ಷಿಸಿದ್ದರು. ಮಹಿಳಾ ಅಧಿಕಾರಿ ರಾಜೇಶ್ವರಿ ತಮ್ಮ ಹೆಗಲ ಮೇಲೆ ಅಸ್ವಸ್ಥ ಉದಯಕುಮಾರ್ ನನ್ನ ಹೊತ್ತುಕೊಂಡು ರಕ್ಷಿಸಿದ್ದ ವಿಡಿಯೋ ವೈರಲ್ ಆಗಿತ್ತು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜೇಶ್ವರಿ ಅವರ ಕಾರ್ಯವನ್ನು ಪ್ರಶಂಸಿಸಿದ್ದರು. ನಿರಂತರ ಮಳೆ ಮತ್ತು ಮರ ಬಿದ್ದ ಕಾರಣ ಉದಯಕುಮಾರ್ ಅಸ್ವಸ್ಥರಾಗಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಇನ್ಸ್ ಪೆಕ್ಟರ್ ರಾಜೇಶ್ವರಿ ತಮ್ಮ ಹೆಗಲ ಮೇಲೆ ಆತನ್ನು ಹೊತ್ತು ಆಟೋರಿಕ್ಷಾದ ಬಳಿಗೆ ದೌಡಾಯಿಸಿದ್ದರು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಂತೆ ಸಹೋದ್ಯೋಗಿಗಳಿಗೆ ಸೂಚಿಸಿ ಕಳುಹಿಸಿಕೊಟ್ಟಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉದಯಕುಮಾರ್ ಮೃತಪಟ್ಟಿದ್ದಾರೆ.