ಬೆಂಗಳೂರು: ಬಿಟ್ ಕಾಯಿನ್ ಹಗರಣವನ್ನು ಸೂಕ್ತವಾಗಿ ತನಿಖೆ ನಡೆಸಿದರೆ ಸಿಎಂ ಬೊಮ್ಮಾಯಿ ತಲೆದಂಡವಾಗಲಿದೆ ಎಂದಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಇದೀಗ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಆಡಿದ ಮಾತು ಸೆಟ್ಲಮೆಂಟ್ ಮಾಡಿಕೊಳ್ಳೋಣ ಎನ್ನುವ ರೀತಿ ಇತ್ತು ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ಪ್ರಕರಣದಲ್ಲಿ ನಾವು ಇದ್ದೀವಿ, ನೀವೂ ಇದ್ದೀರಿ. ಎಲ್ಲರೂ ಸೆಟ್ಲಮೆಂಟ್ ಮಾಡಿಕೊಳ್ಳೋಣ ಎನ್ನುವಂತಿದೆ ಸಿಎಂ ಬೊಮ್ಮಾಯಿ ಆಡುವ ಮಾತುಗಳು ಎಂದು ಕಿಡಿಕಾರಿದ್ದಾರೆ.
ಬಿಟ್ ಕಾಯಿನ್ ವಿಚಾರವಾಗಿ ಪ್ರಧಾನಿ ಮೋದಿ ಬಳಿ ಹೋಗಿ ಇವರೇ ಪ್ರಸ್ತಾಪ ಮಾಡಲು ಯತ್ನಿಸಿದ್ದಾಗಿ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ತೆಲೆಕೆಡಿಕೊಳ್ಳಬೇಡಿ ಎಂದು ಮೋದಿ ಹೇಳಿದ್ದಾರಂತೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದರೆ ಪ್ರಧಾನಿ ಬಳಿ ಪ್ರಸ್ತಾಪ ಯಾಕೆ ಮಾಡುತ್ತಿದ್ದರು. ಈಗ ಸೆಟ್ಲಮೆಂಟ್ ರೀತಿ ಮಾತನಾಡುತ್ತಿರುವುದು ಯಾಕೆ ಎಂದು ವಾಗ್ದಾಳಿ ನಡೆಸಿದರು.
ಹ್ಯಾಕರ್ ಶ್ರೀಕಿಗೆ ಕಸ್ಟಡಿಯಲ್ಲಿದ್ದಾಗಲೇ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಇದೆ. ಮಗನಿಗೆ ಅಧಿಕಾರಿಗಳೇ ಡ್ರಗ್ಸ್ ಕೊಡುತ್ತಿದ್ದಾರೆ ಎಂದು ಶ್ರೀಕಿ ತಂದೆ ಹೇಳಿದ್ದಾರೆ. ಆಪ್ರಜೋಲಾಮ್ ಎಂಬ ಡ್ರಗ್ಸ್ ಕೊಡುತ್ತಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೇ ಶ್ರೀಕಿ ವೈದ್ಯಕೀಯ ಚಿಕಿತ್ಸೆಗೊಳಪಡಿಸಲು ವಿಕ್ಟೋರಿಯಾ ಆಸ್ಪತ್ರೆಗೆ ಮೊದಲು ಕೊಂಡೊಯ್ಯುವ ಬದಲು ಬೇರೊಂದು ಆಸ್ಪತ್ರೆಗೆ ಕರೆದೊಯ್ದು ಸ್ಟಮಕ್ ವಾಶ್ ಮಾಡಿಸಿದ್ದಾರೆ.
ಇದರ ಹಿಂದಿನ ಉದ್ದೇಶವೇನು? ಕೋರ್ಟ್ ನಲ್ಲಿ ಸ್ವತಃ ಶ್ರೀಕಿ ತಾನು ಮೈಲ್ಡ್ ಡ್ರಗ್ಸ್ ತೆಗೆದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಒಟ್ಟಾರೆ ಇಡೀ ಪ್ರಕರಣದ ಹಿಂದೆ ಸರ್ಕಾರದ ಕೈವಾಡವಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.