ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು, ಈ ನಡುವೆ ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಮೈ ಕೊರೆಯುವ ಚಳಿ ಜೊತೆಗೆ ಜಿಟಿ ಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಎತ್ತರದ ಕಟ್ಟಡಗಳು ಮಂಜಿನಲ್ಲಿ ಕಣ್ಮರೆಯಾಗಿದ್ದು, ಪ್ರಕೃತಿ ಪ್ರಿಯರ ಕಣ್ಮನ ಸೆಳೆಯುತ್ತಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವ ಪರಿಣಾಮ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲಿದೆ. ಇನ್ನೂ ಮೂರು ದಿನಗಳ ಕಾಲ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.