ಬಸ್ಗಳಲ್ಲಿ ಪ್ರಯಾಣ ಮಾಡುವಾಗ ಒಳ್ಳೆಯ ಹಾಡನ್ನು ಕೇಳಿಕೊಂಡು ಹೋಗೋದೇ ಚಂದ. ಆದರೆ ಕೆಲವರು ಇಯರ್ ಫೋನ್ಗಳಲ್ಲಿ ಹಾಡನ್ನು ಕೇಳೋದನ್ನು ಬಿಟ್ಟು ಲೌಡ್ ಸ್ಪೀಕರ್ನಲ್ಲಿ ಹಾಡನ್ನು ಕೇಳುತ್ತಾ ಉಳಿದವರಿಗೂ ಹಿಂಸೆ ನೀಡುತ್ತಾರೆ. ಪ್ರಯಾಣದ ವೇಳೆ ಆಗುವ ಈ ಕಿರಿಕಿರಿಯನ್ನು ತಪ್ಪಿಸುವ ಸಲುವಾಗಿ ರಾಜ್ಯ ಹೈಕೋರ್ಟ್ ಹೊಸ ಆದೇಶವೊಂದನ್ನು ಜಾರಿಗೆ ತಂದಿದೆ.
ರಾಜ್ಯ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಜೋರಾಗಿ ಮೊಬೈಲ್ನಲ್ಲಿ ಹಾಡನ್ನು ಕೇಳಲು ಅವಕಾಶವನ್ನು ನಿರಾಕರಿಸಲಾಗಿದೆ. ರಾಜ್ಯ ಹೈಕೋರ್ಟ್ನ ಈ ಆದೇಶದಿಂದ ಅದೆಷ್ಟೋ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಅರ್ಜಿ ಪರಿಶೀಲನೆ ನಡೆಸಿದ ರಾಜ್ಯ ಹೈಕೋರ್ಟ್ ಲೌಡ್ ಸ್ಪೀಕರ್ನಲ್ಲಿ ಹಾಡನ್ನು ಕೇಳುವುದಕ್ಕೆ ನಿರ್ಬಂಧ ಹೇರಿದೆ. ಜೋರಾದ ಧ್ವನಿಯಲ್ಲಿ ಹಾಡು ಕೇಳುವುದು ಹಾಗೂ ವಿಡಿಯೋಗಳನ್ನು ನೋಡುವುದಕ್ಕೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ನಿರ್ಬಂಧ ಹೇರುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಕೆಎಸ್ಆರ್ಟಿಸಿ ಬಸ್ನಲ್ಲಿ ಯಾರಾದರೂ ಜೋರಾದ ಧ್ವನಿಯಲ್ಲಿ ಹಾಡನ್ನು ಕೇಳುವುದು ಅಥವಾ ವಿಡಿಯೋಗಳನ್ನು ನೋಡುತ್ತಿದ್ದರೆ ಕೂಡಲೇ ಅವರಿಗೆ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕು. ಪ್ರಯಾಣಿಕ ಮಾತಿಗೆ ಬಗ್ಗದೇ ಇದ್ದಲ್ಲಿ ಅಂತವರನ್ನು ಬಸ್ನಿಂದ ಕೆಳಗೆ ಇಳಿಸಬಹುದು ಎಂದು ಹೇಳಿದೆ.