ರಾಮನಗರ: ನಿಧಿ ಆಸೆಗಾಗಿ ಕೂಲಿ ಕಾರ್ಮಿಕ ಮಹಿಳೆಯ ಬೆತ್ತಲೆ ಪೂಜೆ ನಡೆಸುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಮೂಲದ ಕೂಲಿಕಾರ್ಮಿಕ ಮಹಿಳೆಯನ್ನು ರಕ್ಷಿಸಲಾಗಿದೆ.
ತಮಿಳುನಾಡಿನ ಪಾರ್ಥಸಾರಥಿ, ಶಶಿಕುಮಾರ್, ನಾಗರಾಜು, ಲೋಕೇಶ್, ಮೋಹನ್, ಲಕ್ಷ್ಮೀನರಸಪ್ಪ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಭೂಹಳ್ಳಿಯ ಶ್ರೀನಿವಾಸ್ ಮನೆಯಲ್ಲಿ ನಿಧಿ ಇದ್ದು, ಬೆತ್ತಲೆ ಪೂಜೆ ಮಾಡಿದರೆ ನಿಧಿಯನ್ನು ಹೊರತೆಗೆಯಬಹುದು ಎಂದು ನಂಬಿಸಿದ ಆರೋಪಿಗಳು ಪೂಜೆ ನೆರವೇರಿಸಿದ್ದಾರೆನ್ನಲಾಗಿದೆ.
ಶ್ರೀನಿವಾಸ ಏಳಿಗೆ ಕಂಡಿರಲಿಲ್ಲ. ಆರು ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಪಾರ್ಥಸಾರಥಿ ಪರಿಚಯವಾಗಿದೆ. ಮನೆಯಲ್ಲಿ ನಿಧಿ ಇದ್ದರೆ ಏಳಿಗೆ ಕಾಣುವುದಿಲ್ಲ ಎಂದು ನಂಬಿಸಿದ್ದ ಪಾರ್ಥಸಾರಥಿ ಶಶಿಕುಮಾರ್ ನನ್ನು ಪರಿಚಯಿಸಿದ್ದ. ಬೆತ್ತಲೆ ಪೂಜೆ ಮಾಡಿದರೆ ನಿಧಿ ಮೇಲೆ ಬರುತ್ತದೆ ಎಂದು ನಂಬಿಸಿದ್ದು, ಶ್ರೀನಿವಾಸನ ಪತ್ನಿ ಬೆತ್ತಲೆ ಪೂಜೆಗೆ ಒಪ್ಪದ ಕಾರಣ ತನ್ನ ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೂಲಿಕಾರ್ಮಿಕ ಮಹಿಳೆಗೆ 50 ಸಾವಿರ ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿ ಪೂಜೆಗೆ ಒಪ್ಪಿಸಿದ್ದ. ಹೀಗೆ ನಿಧಿ ಆಸೆಗೆ ಬೆತ್ತಲೆ ಪೂಜೆ ನಡೆಸುವ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.