ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ನಂತೆಯೇ ಡ್ರೈವಿಂಗ್ ಲೈಸೆನ್ಸ್ ಕೂಡ ಮುಖ್ಯವಾದ ದಾಖಲೆ. ವಾಹನ ಚಲಾಯಿಸುವವರಿಗೆ ಇದು ಕಡ್ಡಾಯ. ಯಾವುದೋ ಕಾರಣಕ್ಕೆ ಡಿಎಲ್ ಹರಿದು ಹೋಗಿದ್ರೆ ಅಥವಾ ಕಳೆದು ಹೋದರೆ ವಾಹನ ಚಲಾಯಿಸುವುದು ಕಷ್ಟಸಾಧ್ಯ. ಮನೆಯಿಂದಲೇ ನಕಲು ಡಿಎಲ್ ಗೆ ಅರ್ಜಿ ಸಲ್ಲಿಸಬಹುದು.
ಡಿಎಲ್ ಕಾಣೆಯಾಗಿದ್ದಲ್ಲಿ ಮೊದಲು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬೇಕಾಗುತ್ತದೆ. ನಕಲು ಡಿಎಲ್ ಗೆ ಅರ್ಜಿ ಸಲ್ಲಿಸುವಾಗ ಎಫ್ಐಆರ್ ಅವಶ್ಯವಾಗುತ್ತದೆ. ಡಿಎಲ್ ಹರಿದು ಹೋದರೆ ಅಥವಾ ಹಳೆಯದಾದಲ್ಲಿ ಒರಿಜಿನಲ್ ಡಿಎಲ್ ಒದಗಿಸಬೇಕಾಗುತ್ತದೆ.
ನಕಲು ಡಿಎಲ್ ಗೆ ಅರ್ಜಿ ಸಲ್ಲಿಸುವ ವಿಧಾನ : ಮೊದಲು ರಸ್ತೆ ಸಾರಿಗೆ ಇಲಾಖೆಯ ವೆಬ್ ಸೈಟ್ ಗೆ ಹೋಗಿ. ವೆಬ್ ಸೈಟ್ ನಲ್ಲಿ ಎಲ್ಲ ಮಾಹಿತಿಯನ್ನು ತುಂಬಿ ಎಲ್ ಎಲ್ ಡಿ ಫಾರ್ಮ್ ಭರ್ತಿ ಮಾಡಿ. ಫಾರ್ಮ್ ತುಂಬಿದ ನಂತರ ಅದರ ಒಂದು ಪ್ರತಿಯನ್ನು ಪ್ರಿಂಟ್ ತೆಗೆಯಿರಿ.
ಇದರ ಜೊತೆಗೆ ಅವಶ್ಯಕತೆಯಿರುವ ಎಲ್ಲ ದಾಖಲೆಗಳನ್ನು ಅದಕ್ಕೆ ಸೇರಿಸಿ. ಎಲ್ಲ ದಾಖಲೆ ಸೇರಿಸಿದ ನಂತರ ಅದನ್ನು ಆರ್.ಟಿ.ಒ. ಕಚೇರಿಗೆ ನೀಡಿ. ಇದನ್ನು ಆನ್ ಲೈನ್ ನಲ್ಲಿ ಕೂಡ ಮಾಡಬಹುದು. ಈ ಎಲ್ಲ ಪ್ರಕ್ರಿಯೆಗಳು ಮುಗಿದ ಮೇಲೆ 30 ದಿನಗಳ ನಂತರ ನಕಲು ಡಿಎಲ್ ಸಿಗುತ್ತದೆ.
ಆರ್ ಟಿಒ ಕಚೇರಿಗೆ ಹೋಗಿ, ಅಲ್ಲಿ ಫಾರ್ಮ್ ಪಡೆದು, ದಾಖಲೆಗಳನ್ನು ನೀಡಿ, ಅಲ್ಲಿಯೇ ಅರ್ಜಿ ಫಾರ್ಮ್ ನೀಡಿ ಬರಬಹುದು. ಇದಕ್ಕೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ನಕಲು ಡಿಎಲ್ ಸಿಗುವ ಮೊದಲು ಒಂದು ರಶೀದಿ ನೀಡಲಾಗುತ್ತದೆ. ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಡಿಎಲ್ ಸಿಕ್ಕ ನಂತರ ಈ ರಶೀದಿಯ ಮೂಲಕ ಡಿಎಲ್ ಟ್ರ್ಯಾಕ್ ಮಾಡಬಹುದು.