ಜೈಪುರ: ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಬಂದ ಆಡಿ ಕಾರು ಮುಂದೆ ಇದ್ದ ಬೈಕ್ ಗಳು, ಸ್ಕೂಟರ್ ಗಳಿಗೆ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆಬದಿಯಲ್ಲಿದ್ದ ಗುಡಿಸಲಿನತ್ತ ನುಗ್ಗಿರುವ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ಸಂಭವಿಸಿದೆ. ದುರ್ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೇಗವಾಗಿ ಬಂದಂತಹ ಬಿಳಿ ಬಣ್ಣದ ಆಡಿ ಕಾರು, ಮುಂದೆ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರ ಮೇಲೆ ಹಾರಿ ಕೆಳಗೆ ಬಿದ್ದಿರುವ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೂ, ಕಾರಿನ ವೇಗವನ್ನು ಕಂಟ್ರೋಲ್ ಮಾಡಲಾಗದೆ, ಕೊನೆಗೆ ರಸ್ತೆಬದಿಯತ್ತ ತನ್ನ ಕಾರು ಚಲಾಯಿಸಿದ ಚಾಲಕ ಅಲ್ಲಿದ್ದ ಗುಡಿಸಲಿನತ್ತ ನುಗ್ಗಿದ್ದಾನೆ. ಕಾರು ಅಪಘಾತ ದೃಶ್ಯ ನೋಡುತ್ತಿದ್ದಂತೆ, ಅಲ್ಲಿದ್ದ ಜನರು ಜೀವಭಯದಲ್ಲಿ ಓಟ ಕಿತ್ತಿದ್ದಾರೆ.
ಇನ್ನು ಗಾಯಾಳುಗಳನ್ನೆಲ್ಲಾ ಜೋಧ್‌ಪುರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಗಂಭೀರ ಗಾಯಗೊಂಡಿದ್ದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಆತನನ್ನು 30 ವರ್ಷದ ಮುಖೇಶ್ ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಮೂವರು ರಸ್ತೆಯ ಪಕ್ಕದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರು ಹಾಗೂ ನಾಲ್ವರು ವಾಹನ ಚಾಲಕರಾಗಿದ್ದಾರೆ.
ಪಾಲ್ ರೋಡ್‌ನಿಂದ ಏಮ್ಸ್ ಕಡೆಗೆ ವೇಗವಾಗಿ ಬರುತ್ತಿದ್ದ ಆಡಿ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕಾರು ಚಾಲಕನನ್ನು ಅಮಿತ್ ಎಂದು ಗುರುತಿಸಲಾಗಿದ್ದು, ಆತ ಪೊಲೀಸರಿಗೆ ಶರಣಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಒಂದು ದಿನದ ಭೇಟಿಗಾಗಿ ಮಂಗಳವಾರ ಬೆಳಗ್ಗೆ ಜೋಧಪುರ ತಲುಪಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಧಾವಿಸಿ ಗಾಯಗೊಂಡವರನ್ನು ಭೇಟಿ ಮಾಡಿದ್ದಾರೆ. ಮೃತಪಟ್ಟ ಮುಖೇಶ್ ಕುಟುಂಬಕ್ಕೆ 2 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಮುಖ್ಯಮಂತ್ರಿ ಈ ವೇಳೆ ಘೋಷಿಸಿದ್ದಾರೆ.