ನವದೆಹಲಿ: ಪಾಕಿಸ್ತಾನ ಸೇನೆ ಫೈರಿಂಗ್ ನಿಂದ ಭಾರತೀಯ ಮೀನುಗಾರ ಸಾವು ಕಂಡ ಪ್ರಕರಣವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ.
ಅಪ್ರಚೋದಿತ ಫೈರಿಂಗ್ ನಡೆಸಿರುವುದನ್ನು ಖಂಡಿಸಲಾಗಿದ್ದು, ಪಾಕಿಸ್ತಾನ ರಾಯಭಾರಿಗೆ ವಿದೇಶಾಂಗ ಇಲಾಖೆಯಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಪಾಕ್ ಹೈಕಮಿಷನ್ನ ಹಿರಿಯ ರಾಜತಾಂತ್ರಿಕರನ್ನು ಕರೆಸಿ, ಭಾರತೀಯ ಮೀನುಗಾರನನ್ನು ಕೊಂದಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಶನಿವಾರ ಅರಬ್ಬಿ ಸಮುದ್ರದಲ್ಲಿ ಭಾರತೀಯ ಮೀನುಗಾರಿಕಾ ದೋಣಿಯ ಮೇಲೆ ಪಾಕಿಸ್ತಾನಿ ಕಡಲ ಭದ್ರತಾ ಏಜೆನ್ಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಪ್ರಜೆ ಸಾವು ಕಂಡು ಮತ್ತು ಮತ್ತೊಬ್ಬ ಗಾಯಗೊಂಡಿದ್ದರು.
ಅಂತರರಾಷ್ಟ್ರೀಯ ನಿಯಮ ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ವಿರುದ್ಧವಾಗಿ ಭಾರತೀಯ ಮೀನುಗಾರಿಕಾ ದೋಣಿಯ ಮೇಲೆ ಗುಂಡು ಹಾರಿಸಿ ಜೀವಹಾನಿ ಉಂಟುಮಾಡುವ ಪಾಕಿಸ್ತಾನದ ಕ್ರಮ ಸರಿಯಲ್ಲ ಎಂದು ಹೇಳಲಾಗಿದೆ. ಮೀನುಗಾರರ ಸಮಸ್ಯೆಯನ್ನು ಮಾನವೀಯ ಮತ್ತು ಜೀವನೋಪಾಯದ ವಿಷಯವೆಂದು ಪರಿಗಣಿಸಬೇಕು. ಘಟನೆಯ ಬಗ್ಗೆ ತನಿಖೆ ನಡೆಸಬೇಕು. ಅಪ್ರಚೋದಿತ ಗುಂಡಿನ ದಾಳಿಯಿಂದ ದೂರವಿರಲು ತನ್ನ ಪಡೆಗಳಿಗೆ ಸೂಚನೆ ನೀಡಬೇಕು ಎಂದು ಪಾಕಿಸ್ತಾನ ಸರ್ಕಾರಕ್ಕೆ ವಾರ್ನಿಂಗ್ ಮಾಡಲಾಗಿದೆ.