ಸ್ನಾನ ಮಾಡಿದ ಬಳಿಕ ಪತ್ನಿ ಟವಲ್ ಕೊಡಲು ವಿಳಂಬ ಮಾಡಿದ್ದಕ್ಕೆ ಕೋಪಗೊಂಡ ಪತಿಯು ಪತ್ನಿಯನ್ನು ಕೊಲೆ ಮಾಡಿದ ಆಘಾತಕಾರಿ ಘಟನೆಯು ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಸಂಭವಿಸಿದೆ.
ಕಿರ್ನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಿರಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಯನ್ನು ರಾಜ್ಕುಮಾರ್ ಬಾಗೆ(50) ಎಂದು ಗುರುತಿಸಲಾಗಿದೆ. ದಿನಗೂಲಿ ಕಾರ್ಮಿಕನಾಗಿದ್ದ ಈತ ಪತ್ನಿ ಪುಷ್ಪಾ ಬಾಯಿ(45)ಬಳಿ ಸ್ನಾನವಾದ ಬಳಿಕ ಟವೆಲ್ ನೀಡುವಂತೆ ಕೇಳಿದ್ದಾನೆ. ಈ ವೇಳೆ ಪಾತ್ರೆ ತೊಳೆಯುತ್ತಿದ್ದ ಪುಷ್ಪಾ ಬಾಯಿ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಾರೆ.
ಇಷ್ಟಕ್ಕೆ ಕೋಪಗೊಂಡ ಪತಿಯು ಪತ್ನಿಯ ತಲೆಗೆ ಸಲಿಕೆಯಿಂದ ಪದೆ ಪದೆ ಬಾರಿಸಿದ್ದಾನೆ. ಗಾಯಗೊಂಡ ಪುಷ್ಪಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಾಯಿಯನ್ನು ಪ್ರಾಣಾಪಾಯದಿಂದ ಬಚಾವ್ ಮಾಡಲು ಬಂದ 23 ವರ್ಷದ ಮಗಳಿಗೂ ರಾಜ್ಕುಮಾರ್ ಆವಾಜ್ ಹಾಕಿದ್ದ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕ ಪುಷ್ಪಾ ಮೃತದೇಹವನ್ನು ಕುಟುಂಬಸ್ಥರಿಗೆ ರವಾನಿಸಲಾಗಿದೆ. ಪುಷ್ಪಾ ಕುಟುಂಬಸ್ಥರು ಆರೋಪಿ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.