ಹಾಸನ: ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, ನೂರಾರು ಭಕ್ತರು ಪತ್ರದ ಮೂಲಕ ದೇವಿಗೆ ತರಹೇವಾರಿ ಬೇಡಿಕೆಗಳನ್ನು ಮುಂದಿಟ್ಟು ಹುಂಡಿಗೆ ಹಾಕಿರುವುದು ಪತ್ತೆಯಾಗಿದೆ.
ಅಕ್ಟೋಬರ್ 28ರಿಂದ ನವೆಂಬರ್ 6ರವರೆಗೆ ಹಾಸನಾಂಬೆ ಉತ್ಸವ ಜರುಗಿದ್ದು, 10 ದಿನಗಳಲ್ಲಿ 4 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ಇದೀಗ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಕಾಣಿಕೆ ಜೊತೆಗೆ ಭಕ್ತರ ವಿಭಿನ್ನ ಬೇಡಿಕೆಯ ಪತ್ರಗಳು ಕೂಡ ಪತ್ತೆಯಾಗಿದ್ದು ಎಲ್ಲರ ಗಮನ ಸೆಳೆಯುತ್ತಿವೆ.
ಸಾಮಾನ್ಯವಾಗಿ ಸಂತಾನ ಪ್ರಾಪ್ತಿಗಾಗಿ, ಗಂಡನ ದುಶ್ಚಟ ನಿವಾರಣೆಯಾಗಲಿ, ಆರ್ಥಿಕ ಸಂಕಷ್ಟ ಪರಿಹಾರವಾಗಲಿ, ಕೆಲಸ ಸಿಗಲಿ ಇಂತಹ ಬೇಡಿಕೆಗಳನ್ನು ದೇವರ ಮುಂದಿಡುವುದು ಸಾಮಾನ್ಯ. ಆದರೆ ಹಾಸನಾಂಬೆಗೆ ವಿಚಿತ್ರ ಬೇಡಿಕೆಗಳನ್ನು ಮುಂದಿಟ್ಟು ಭಕ್ತರು ದೇವಿ ಮೊರೆ ಹೋಗಿದ್ದಾರೆ.
ʼಕಸದಿಂದ ರಸʼ ಮಾತಿಗೆ ಪೂರಕವಾದ ಕೆಲಸ ಮಾಡಿದ್ದಾಳೆ ಈ ಮಹಿಳೆ
ಒಬ್ಬರು ಹೊಳೆ ನರಸಿಪುರದ ಶಾಸಕರನ್ನು ಬದಲಾಯಿಸು ತಾಯೇ ಎಂದು ಮೊರೆಯಿಟ್ಟಿದ್ದರೆ, ಇನ್ನೊಬ್ಬರು ಹಾಳಾಗಿರುವ ರಸ್ತೆ ದುರಸ್ತಿ ಕಾರ್ಯ ನೆರವೇರಿಸುವಂತೆ ಕೋರಿದ್ದಾರೆ. ಮತ್ತೊಬ್ಬರು ಒಂದು ವರ್ಷದಲ್ಲಿ ಗಂಡು ಮಗುವಾದರೆ 5000 ರೂಪಾಯಿ ಕಾಣಿಕೆ ಹಾಕುವುದಾಗಿ ಪತ್ರ ಬರೆದಿದ್ದಾರೆ. ವಿದ್ಯಾರ್ಥಿಯೊಬ್ಬ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಮಾಡು ಎಂದು ಬೇಡಿದ್ದರೆ, ಇನ್ನೋರ್ವ ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಬರುವಂತೆ ಮಾಡು ಎಂದು ಬೇಡಿಕೆ ಇಟ್ಟಿದ್ದಾನೆ. ಯುವತಿಯೊಬ್ಬಳು ತಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡಿಸು ಎಂದು ರಕ್ತದಲ್ಲಿ ಪತ್ರ ಬರೆದಿದ್ದರೆ, ಪ್ರಮೋಷನ್ ಸಿಕ್ಕು, ಮಗನ ಮದುವೆ ಮಾಡಿಸು ಎಂದು ತಂದೆಯೊಬ್ಬ ಪತ್ರ ಬರೆದಿದ್ದಾರೆ.
ಇನ್ನೊಂದು ಪತ್ರದಲ್ಲಿ ಹೆಚ್.ಡಿ.ರೇವಣ್ಣ ಕುಟುಂಬದ ಸದಸ್ಯರು ಜನರ ಪ್ರಾಣ ಹಿಂಡುತ್ತಿದ್ದು, ಅವರ ಕುಟುಂಬದವರನ್ನೆಲ್ಲಾ ಸೋಲಿಸು ತಾಯಿ. ಹೊಳೆನರಸಿಪುರ ಜನತೆಗೆ ಒಳಿತು ಮಾಡು ಎಂದು ಬೇಡಿಕೆ ಇಟ್ಟಿದ್ದಾರೆ.