ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7 ) ತಮ್ಮ ತಲೆಗೂದಲನ್ನು ದಾನ ಮಾಡಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ರಿಯಾನ್ ಸಲೂನ್ ನಲ್ಲಿ ಕ್ಷೌರ ಮಾಡುತ್ತಿರುವ ವಿಡಿಯೋವನ್ನು ಮಾಧುರಿ ದೀಕ್ಷಿತ್ ಹಂಚಿಕೊಂಡಿದ್ದಾರೆ. ಕೂದಲು ದಾನ ಮಾಡುವುದಕ್ಕಾಗಿ ರಿಯಾನ್ ಎರಡು ವರ್ಷಗಳಿಂದ ತಮ್ಮ ಕೂದಲಿಗೆ ಕತ್ತರಿ ಹಾಕಿರಲಿಲ್ಲವಂತೆ. ಎರಡು ವರ್ಷಗಳ ಬಳಿಕ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿ ಅದನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ.
ಕ್ಯಾನ್ಸರ್ಗಾಗಿ ಕೀಮೋಗೆ ಒಳಗಾಗುತ್ತಿರುವ ಹಲವಾರು ಜನರನ್ನು ನೋಡಿ ರಿಯಾನ್ ಗೆ ಬಹಳ ವೇದನೆಯಾಯಿತಂತೆ. ಹೀಗಾಗಿ ತನ್ನ ಕೂದಲನ್ನು ದಾನ ಮಾಡಲು ನಿರ್ಧರಿಸಿದ್ದ. ಆತನ ನಿರ್ಧಾರದಿಂದ ಪೋಷಕರಾದ ನಾವು ರೋಮಾಂಚನಗೊಂಡೆವು ಎಂದು ಮಾಧುರಿ ಹೇಳಿದ್ದಾರೆ. ತಮ್ಮ ಪುತ್ರ ಮಾಡಿರುವ ಕಾರ್ಯಕ್ಕೆ ಮಾಧುರಿ ದಂಪತಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇನ್ನು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ಉದಾತ್ತ ಉದ್ದೇಶಕ್ಕೆ ಬದ್ಧರಾಗಿರುವ ರಿಯಾನ್ ಅವರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಅಲ್ಲದೆ ನಟಿ ಶಿಲ್ಪಾ ಶೆಟ್ಟಿ, ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ಅವರು ಕೂಡ ರಿಯಾನ್ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
https://youtu.be/3CYMCelg3tM