ಕೊಲ್ಕೊತ್ತಾ: ಟಿವಿ ಚಾನೆಲ್ ಗಳ ದರ ದುಬಾರಿಯಾಗುವ ಸಾಧ್ಯತೆ ಇದೆ. ದರ ಏರಿಕೆಗೆ ಬ್ರಾಡ್ ಕಾಸ್ಟ್ ಕಂಪನಿಗಳು ಪ್ರಸ್ತಾವ ಸಲ್ಲಿಸಿದೆ. ಟ್ರಾಯ್ ವಿರುದ್ಧ ಬ್ರಾಡ್ ಕಾಸ್ಟ್ ಕಂಪನಿಗಳು ಸುಪ್ರೀಂಕೋರ್ಟ್ ಮೊರೆಹೋಗಿದ್ದು, ಡಿಸೆಂಬರ್ ನಂತರ ಶೇಕಡ 50 ರವರೆಗೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ.
ಡಿಸೆಂಬರ್ 1 ರಿಂದ ಟಿವಿ ಚಾನೆಲ್ ದರದಲ್ಲಿ 12 ರೂ. ಮಿತಿ ಅಳವಡಿಸುವಂತೆ ಟ್ರಾಯ್ ಪ್ರಸ್ತಾಪಿಸಿತ್ತು. ಇದರ ವಿರುದ್ಧ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಅಂಡ್ ಡಿಜಿಟಲ್ ಫೆಡರೇಶನ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಟಿವಿ ಚಾನೆಲ್ ಚಂದಾದಾರಿಕೆ ದರದಲ್ಲಿ ಏರಿಕೆ ಪ್ರಸ್ತಾವ ಮುಂದಿಟ್ಟಿದೆ.
ಸುಪ್ರೀಂಕೋರ್ಟ್ ಈ ಪ್ರಸ್ತಾವವನ್ನು ಸಮ್ಮತಿಸಿದರೆ ಬಳಕೆದಾರರಿಗೆ ಡಿಸೆಂಬರ್ ನಿಂದ ಕೇಬಲ್ ಟಿವಿ ಚಂದಾದಾರಿಕೆ ದರದಲ್ಲಿ ಶೇ 50ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಮಾಹಿತಿಯ ಪ್ರಕಾರ, ಪ್ರಮುಖ ಕ್ರೀಡೆ, ಮನೋರಂಜನೆ, ಸಿನಿಮಾ ವಾಹಿನಿಗಳ ಚಂದಾದಾರಿಕೆ ದರ 15 ರಿಂದ 30 ರೂ.ರವರೆಗೂ ಹೆಚ್ಚಳವಾಗಬಹುದು. ಕೆಲವು ಬ್ರಾಡ್ ಕಾಸ್ಟ್ ಕಂಪನಿಗಳ ಹೊಸ ದರದ ಪ್ರಕಾರ ಚಾನಲ್ ಗೆ 15 ರಿಂದ 30 ರ ವರೆಗೆ ದರ ನಿಗದಿಪಡಿಸಲಾಗುವುದು ಎನ್ನಲಾಗಿದೆ.
ಕಳೆದ 2 ವರ್ಷಗಳ ಹಿಂದೆ ಚಾನೆಲ್ ದರ ಶೇ. 40 ರಷ್ಟು ಏರಿಕೆಯಾಗಿದ್ದರಿಂದ ಕೊಲ್ಕೊತ್ತಾದಲ್ಲಿ ಶೇ. 40 ರಷ್ಟು ಚಂದಾದಾರಿಕೆ ಕುಸಿದಿತ್ತು. ಈಗ ಶೇ. 25 ರಿಂದ 30 ರಷ್ಟು ದರ ಹೆಚ್ಚಳವಾದರೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಆಲ್ ಇಂಡಿಯಾ ಬಂಗಾಳ್ ಕೇಬಲ್ ಟಿವಿ ಅಂಡ್ ಬ್ರಾಡ್ ಬ್ಯಾಂಡ್ ಆಪರೇಟರ್ಸ್ ಯುನೈಟೆಡ್ ಫೋರಮ್ ಜಂಟಿ ಸಂಚಾಲಕ ತಪಶ್ ದಾಸ್.