ಮಂಗಳೂರು: ಪಟಾಕಿ ಹೊಡೆಯುವ ವಿಚಾರಕ್ಕೆ ಗಲಾಟೆ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನ ರಥಬೀದಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ರಥಬೀದಿಯ ವೀರ ವೆಂಕಟೇಶ ಅಪಾರ್ಟ್ ಮೆಮಟ್ ನಲ್ಲಿ ದುರಂತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿನಾಯಕ ಕಾಮತ್ ಅವರು ಸಾವನ್ನಪ್ಪಿದ್ದಾರೆ. ಚೂರಿ ಇರಿಯುವ ದೃಶ್ಯ ಅಪಾರ್ಟ್ ಮೆಂಟ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಕಿಣಿ ಸೇರಿಕೊಂಡು ವಿನಾಯಕ ಅವರನ್ನು ಚಾಕುವಿನಿಂದ ಇರಿದಿದ್ದಾರೆ. ಬಂದರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇವರ ನಡುವೆ ಹಿಂದೆ ಆಗಾಗ ಜಗಳವಾಗಿದ್ದು, ಪಟಾಕಿ ಸಿಡಿಸುವ ವಿಚಾರಕ್ಕೆ ಮತ್ತೆ ಜಗಳ ಶುರುವಾಗಿದ್ದು, ಆಕ್ರೋಶಗೊಂಡ ಕೃಷ್ಣಾನಂದ ಕಿಣಿ ಮತ್ತು ಅವಿನಾಶ್ ಕಿಣಿ ಅವರು ವಿನಾಯಕ ಕಾಮತ್ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಹೊಟ್ಟೆ, ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿನಾಯಕ ಕಾಮತ್ ಮೃತಪಟ್ಟಿದ್ದಾರೆನ್ನಲಾಗಿದೆ.