ಬೆಂಗಳೂರು: ಯಾವುದೇ ಪಕ್ಷವನ್ನು ಕಟ್ಟಬೇಕಾದರೆ ಆರ್ಥಿಕ ಶಕ್ತಿ ಮುಖ್ಯ. ಕಾಂಗ್ರೆಸ್ ಮತ್ತು ಬಿಜೆಪಿ ಬಳಿ ಹಣ ಎಷ್ಟಿದೆ ಎಂದು ಪುನರುಚ್ಚರಿಸುವುದಿಲ್ಲ. ಜೆಡಿಎಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿದ್ದು, ಇದನ್ನು ಉಳಿಸಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕತೆ ಬೇಕಿದ್ದು, ಇದರ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು. ಪಂಚರತ್ನ ಯೋಜನೆ ಜಾರಿಗೆ ಕಾರ್ಯಾಗಾರ ನಡೆಸಲಾಗಿದೆ. ನಮ್ಮ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಕರೆದು ಕಾರ್ಯಾಗಾರ ನಡೆಸಲಾಗಿದೆ. ಇದಕ್ಕೆ ಹಣ ಹೊಂದಿಸಲು ಎಷ್ಟು ಸಮಸ್ಯೆ ಆಗಿದೆ ಎನ್ನುವುದು ಗೊತ್ತಿದೆ ಎಂದು ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಎಲ್ಲರೂ ಶ್ರಮಪಟ್ಟಿದ್ದಾರೆ ಎನ್ನುವುದು ತಿಳಿದಿದೆ. 2023 ರ ಚುನಾವಣೆ ವೇಳೆಗೆ ಎಲ್ಲರೂ ಸಕ್ರಿಯರಾಗಿ ಕೆಲಸ ಮಾಡಲು ಯೋಜನೆ ಸಿದ್ಧವಿದೆ. ನವೆಂಬರ್ 8 ರಿಂದ ಎರಡನೇ ಹಂತದ ಕಾರ್ಯಾಗಾರ ನಡೆಯಲಿದೆ. ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡುವುದಿಲ್ಲ. ನಮಗೆ ಬಂದಿರುವ ಫಲಿತಾಂಶವನ್ನು ಸ್ವೀಕರಿಸುತ್ತೇವೆ. ಪ್ರಾದೇಶಿಕ ಪಕ್ಷ ಉಳಿಸಲು ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.