ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ವಿಧೇಯಕವೊಂದನ್ನು ಪ್ರಸ್ತುತಪಡಿಸಲಾಗಿದೆ. ಈ ವಿಧೇಯಕವನ್ನು ನ್ಯೂಯಾರ್ಕ್ನ ಸಂಸದೆ ಕೆರೊಲಿನ್ ಬಿ ಮೈಲೋನಿ ನೇತೃತ್ವದಲ್ಲಿ ಪ್ರಸ್ತಾವ ಪಡಿಸಲಾಗಿದೆ. ದೀಪಾವಳಿ ಹಬ್ಬದಂದು ಅಮೆರಿಕದಲ್ಲಿ ರಜೆ ಘೋಷಿಸುವಂತೆ ಕೋರಿ ಈ ವಿಧೇಯಕವನ್ನು ಪರಿಚಯಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮೆಲಾನಿ, ಭಾರತೀಯ ಮೂಲದ ಸದಸ್ಯರ ಜೊತೆ ಸೇರಿ ಈ ವಿಧೇಯಕವನ್ನು ಪ್ರಸ್ತುತಪಡಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ.
ಈ ಐತಿಹಾಸಿಕ ವಿಧೇಯಕವನ್ನು ಪ್ರಸ್ತುತ ಪಡಿಸುವಲ್ಲಿ ಭಾರತೀಯ ಮೂಲದ ಅಮೆರಿಕ ಸಂಸದ ರಾಜಾ ಕೃಷ್ಣಮೂರ್ತಿ ಸೇರಿದಂತೆ ಅನೇಕರು ಸಾಥ್ ನೀಡಿದ್ದಾರೆ. ಅವರು ಬೆಳಕಿನ ಹಬ್ಬವಾದ ದೀಪಾವಳಿಗೆ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವಕ್ಕೆ ಮಾನ್ಯತೆ ನೀಡುವಂತೆ ಕೋರಿ ನಿರ್ಣಯವೊಂದನ್ನು ಅಮೆರಿಕ ಸಂಸತ್ನಲ್ಲಿ ಮಂಡಿಸಿದ್ದರು.
ದೀಪಾವಳಿಯು ಕೋವಿಡ್19ನಿಂದ ಕತ್ತಲೆಯಲ್ಲಿರುವ ದೇಶವು ಬೆಳಕಿನೆಡೆಗೆ ಸಾಗುವ ಸಂಕೇತವಾಗಿದೆ. ನಾನು ನಿಮ್ಮೆಲ್ಲರೊಂದಿಗೆ ಸೇರಿ ಕತ್ತಲೆಯ ಎದುರು ಬೆಳಕನ್ನು ಗೆಲ್ಲಲು ಇಚ್ಚಿಸುತ್ತೇನೆ, ಕೆಟ್ಟದರ ಎದುರು ಒಳ್ಳೆಯದನ್ನು ಗೆಲ್ಲಲು ಬಯಸುತ್ತೇನೆ. ಅಜ್ಞಾನದ ಎದುರು ಜ್ಞಾನವನ್ನು ಬೆಳಗಲು ಬಯಸುತ್ತೇನೆ. ವಾಸ್ತವದಲ್ಲಿ ಈ ವರ್ಷದ ದೀಪಾವಳಿ ನಮ್ಮ ದೇಶವನ್ನು ಕೋವಿಡ್ ಕತ್ತಲೆಯಿಂದ ಹೊರತರುವುದರ ಪ್ರತೀಕವಾಗಿದೆ ಎಂದು ಮೆಲಾನಿ ಹೇಳಿದರು.
ಇನ್ನು ಇದೇ ವೇಳೆ ಮಾತನಾಡಿದ ರಾಜಾ ಕೃಷ್ಣಮೂರ್ತಿ, ದೀಪಾವಳಿ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವಗಳಿಗೆ ಮಾನ್ಯತೆ ನೀಡಿದಲ್ಲಿ ಅದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳ ಗೌರವವನ್ನು ಹೆಚ್ಚಿಸಿದಂತೆ ಆಗುತ್ತದೆ. ದೀಪಾವಳಿಗೆ ವಿಶಾಲವಾದ ಧಾರ್ಮಿಕ , ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವಕ್ಕೆ ಮಾನ್ಯತೆ ನೀಡುವ ಪ್ರಸ್ತಾವನೆ ಸಲ್ಲಿಸುತ್ತಿರೋದಕ್ಕೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.