ಬೆಂಗಳೂರು: ಉಪ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಿ.ಎಂ. ಉದಾಸಿ ಬೇಸ್ ಮುಂದುವರೆಸಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ ಹಾನಗಲ್ ನಲ್ಲಿ ಅಲ್ಪ ಪ್ರಮಾಣದಲ್ಲಿ ಹಿನ್ನಡೆಯಾಗಿದೆ. ಉದಾಸಿ ಜನಪ್ರಿಯತೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಹಾನಗಲ್ ನಲ್ಲಿ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಭಾವಿಸಿ ಜನ ಅವರನ್ನು ಬೆಂಬಲಿಸಿದ್ದಾರೆ ಎಂದರು.
ಜೀವನ್ಮರಣ ಸ್ಥಿತಿಯಲ್ಲಿದ್ದ ನಾಯಿಯನ್ನು ಕಾಪಾಡಿದ ಡೆಲಿವರಿ ಚಾಲಕ
ಹಾನಗಲ್ ಸೋಲಿನ ಕುರಿತು ನಾವು ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದೇವೆ. ಕಾರಣಗಳನ್ನು ವಿಶ್ಲೇಷಿಸಿ, ಅವುಗಳನ್ನು ಸರಿಪಡಿಸಿ ಮುಂದೆ ಹೋಗುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಉಪಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷದವರು ಹಾಗೆ ಹೇಳುವುದು ಸಹಜ. ಅದು ಅವರ ಕೆಲಸ. ಸಿಂಧಗಿಯಲ್ಲಿ 31,000 ದ ದೊಡ್ಡ ಅಂತರದಿಂದ ಕಾಂಗ್ರೆಸ್ ಸೋತಿದೆ. ಅದಕ್ಕೆ ಏನು ಉತ್ತರ ನೀಡುತ್ತಾರೆ. ಸಿಂದಗಿಯಲ್ಲಿ ಕಾಂಗ್ರೆಸ್ ಸೋಲನ್ನು ಮೊದಲು ನೋಡಿಕೊಳ್ಳಲಿ. ದಿಕ್ಸೂಚಿ ಸಿಂದಗಿಯಿಂದಲೇ ಆರಂಭವಾಗಬೇಕು ಹಾಗಾದರೆ ಎಂದು ತಿರುಗೇಟು ನೀಡಿದರು.