ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಹೊಸ ಪಕ್ಷಕ್ಕೆ ಯಾವ ಹೆಸರನ್ನು ಇಡಲಿದ್ದಾರೆ ಎಂಬ ಕುತೂಹಲಗಳಿಗೆ ಕೊನೆಗೂ ಕ್ಯಾಪ್ಟನ್ ತೆರೆ ಎಳೆದಿದ್ದಾರೆ. ತಮ್ಮ ನೂತನ ಪಕ್ಷಕ್ಕೆ ಪಂಜಾಬ್ ಲೋಕ್ ಕಾಂಗ್ರೆಸ್ ಎಂದು ಕ್ಯಾಪ್ಟನ್ ಹೆಸರು ಘೋಷಣೆ ಮಾಡಿದ್ದಾರೆ. ಪಕ್ಷದ ನೋಂದಣಿ ಪ್ರಕ್ರಿಯೆಯು ಚುನಾವಣಾ ಆಯೋಗದಲ್ಲಿ ಇನ್ನೂ ಬಾಕಿಯಿದೆ ಎನ್ನಲಾಗಿದೆ.
ಚಂಡೀಗಢದಲ್ಲಿ ಪಕ್ಷದ ಹೆಸರನ್ನು ಬಹಿರಂಗಪಡಿಸುತ್ತಾ ಮಾತನಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ನಾನು ಈ ಹಿಂದೆಯೇ ಹೊಸ ಪಕ್ಷದ ಬಗ್ಗೆ ಹಾಗೂ ಆ ಸಂಬಂಧ ವಕೀಲರು ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದೆ. ನಮ್ಮ ವಕೀಲರು ತಮ್ಮ ಕೆಲಸ ಮುಂದುವರಿಸಿದ್ದು ಪಕ್ಷದ ನೊಂದಣಿಗೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದ್ರು.
ಪಂಜಾಬ್ ಲೋಕ ಕಾಂಗ್ರೆಸ್ ಎಂಬ ಹೆಸರಿಗೆ ಚುನಾವಣಾ ಆಯೋಗವು ಯಾವುದೇ ರೀತಿಯ ವಿರೋಧ ಸೂಚಿಸಿಲ್ಲ ಎಂದೂ ಕ್ಯಾಪ್ಟನ್ ಹೇಳಿದ್ರು.
ಇನ್ನು ಪಕ್ಷದ ಚಿಹ್ನೆ ವಿಚಾರವಾಗಿ ಮಾತನಾಡಿದ ಕ್ಯಾಪ್ಟನ್, ಚುನಾವಣಾ ಆಯೋಗವು ಸದ್ಯಕ್ಕೆ ಮೂರು ಚಿಹ್ನೆಗಳನ್ನು ನೀಡಿದ್ದು ಅದರಲ್ಲಿ ಒಂದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಿದೆ. ಅಲ್ಲದೇ ನಮ್ಮ ಪಕ್ಷ ಕೂಡ ಮೂರು ಬೇರೆ ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಟ್ಟಿದೆ. ಹೀಗಾಗಿ ಒಟ್ಟು ಆರು ಚಿಹ್ನೆಗಳಲ್ಲಿ ಒಂದನ್ನು ಅಂತಿಮಗೊಳಿಸಲಿದ್ದೇವೆ ಎಂದು ಹೇಳಿದ್ರು.
ಪಕ್ಷವನ್ನು ಔಪಚಾರಿಕವಾಗಿ ಮುಂದಿನ ದಿನಗಳಲ್ಲಿ ಅನಾವರಣಗೊಳಿಸಲಾಗುವುದು. ಈ ವೇಳೆಯಲ್ಲಿಯೇ ಪಕ್ಷದ ನೀತಿ ನಿಯಮ, ಕಾರ್ಯಕ್ರಮಗಳು, ಅಜೆಂಡಾ ಹಾಗೂ ಗುರಿಯ ಬಗ್ಗೆಯೂ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.