8ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಯಿಂದ ಹೊರಗೆ ಹಾಕಿದ್ದಾರೆಂದು ಮನನೊಂದು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಉತ್ತರ ಪ್ರದೇಶದ ಚಿಲುತಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾರ ಗ್ರಾಮದಲ್ಲಿ ನಡೆದಿದೆ.
ಶಾಲೆಯಲ್ಲಿ ಶಿಕ್ಷಕರು ಥಳಿಸಿದ್ದು ಮಾತ್ರವಲ್ಲದೇ ಶಾಲೆಯಿಂದಲೂ ಹೊರಹಾಕಿದ್ದರಿಂದ ಅತಿಯಾಗಿ ನೊಂದಿದ್ದ ಬಾಲಕ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾನೆ.
ಮೃತ ಬಾಲಕ ಹಾಗೂ ಆತನ ತಮ್ಮ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸಹೋದರನಿಗೆ ಥಳಿಸಿದರು ಎಂಬ ಕಾರಣಕ್ಕೆ ಬಾಲಕ ಪ್ರತಿಭಟನೆ ನಡೆಸಿದ್ದನು. ಇದಾದ ಬಳಿಕ ಪ್ರಾಂಶುಪಾಲರ ಬಳಿಕ ಬಾಲಕನನ್ನು ಕೊಂಡೊಯ್ದು ಆತನಿಗೆ ಥಳಿಸಲಾಗಿತ್ತು. ಇದಾಗಿ ಒಂದು ದಿನದ ಬಳಿಕ ಬಾಲಕನ್ನು ಶಾಲೆಯಿಂದ ಹೊರ ಹಾಕಲಾಗಿತ್ತು. ಈ ಎಲ್ಲಾ ಘಟನೆಗಳಿಂದ ನೊಂದಿದ್ದ ಬಾಲಕ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
ಬಾಲಕ ಡೆತ್ ನೋಟ್ನ್ನು ಬರೆದಿಟ್ಟು ಸಾವನ್ನಪ್ಪಿದ್ದಾನೆ. ಬಾಲಕ ಬರೆದಿರುವ ಡೆತ್ ನೋಟ್ ಹಾಗೂ ಬಾಲಕನ ತಂದೆ ನೀಡಿದ ದೂರನ್ನು ಆಧರಿಸಿ ಪೊಲೀಸರು ಶಾಲಾ ಪ್ರಾಂಶುಪಾಲ, ತರಗತಿ ಶಿಕ್ಷಕ ಹಾಗೂ ಶಾಲೆಯ ಮ್ಯಾನೇಜರ್ ವಿರುದ್ಧ ಕೇಸ್ ದಾಖಲಾಗಿದೆ. ಶಾಲಾ ಮ್ಯಾನೇಜರ್ನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಾಂಶುಪಾಲ ಹಾಗೂ ಶಿಕ್ಷಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.