ಜಾರ್ಖಂಡ್ನಲ್ಲಿ ಆರೋಗ್ಯ ಕಾರ್ಯಕರ್ತರ ದೊಡ್ಡ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ನಾಯಿ ಕಚ್ಚಿದ ಕಾರಣ ರೇಬಿಸ್ ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಘಟನೆ ಜಾರ್ಖಂಡ್ ನ ಪಲಾಮು ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ರಾಜು ಸಿಂಗ್ ಎಂಬ ವ್ಯಕ್ತಿಗೆ ನಾಯಿ ಕಚ್ಚಿತ್ತು. ಆಂಟಿ ರೇಬಿಸ್ ಲಸಿಕೆಗಾಗಿ ಪಟಾನ್ ಬ್ಲಾಕ್ ಹೆಡ್ಕ್ವಾರ್ಟರ್ಸ್ ಹೆಲ್ತ್ ಸೆಂಟರ್ಗೆ ಬಂದಿದ್ದ. ಅಲ್ಲಿ ಆರೋಗ್ಯ ಕಾರ್ಯಕರ್ತರು, ರೇಬಿಸ್ ಲಸಿಕೆ ಬದಲು ಕೊರೊನಾ ಲಸಿಕೆ ಹಾಕಿದ್ದಾರೆ. ರಾಜು ಈಗಾಗಲೇ ಕೊರೊನಾದ ಎರಡೂ ಲಸಿಕೆ ಪಡೆದಿದ್ದ ಎನ್ನಲಾಗಿದೆ.
ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಹಾಗೂ ಸಹ ಸಿವಿಲ್ ಸರ್ಜನ್ ಅನಿಲ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ರೋಗಿಯ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಇಲ್ಲಿಯವರೆಗೆ ದೇಹದಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.