ನವದೆಹಲಿ: ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅಕ್ಟೋಬರ್ 31, 1984ರಂದು ಹತ್ಯೆಗೀಡಾಗಿದ್ದರು. ತಮ್ಮ ಅಜ್ಜಿಯ ಪುಣ್ಯತಿಥಿ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾವನಾತ್ಮಕ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಮೂರು ನಿಮಿಷಗಳು ಇರುವ ವಿಡಿಯೋದಲ್ಲಿ ರಾಹುಲ್ ಗಾಂಧಿ (ಆಗ ಅವರಿಗೆ ಕೇವಲ 14 ವರ್ಷ) ಅಂತ್ಯಕ್ರಿಯೆಯಲ್ಲಿ ಅಳುತ್ತಿರುವ ಮನಕಲಕುವ ದೃಶ್ಯವಿದೆ. ಇದಾದ ಏಳು ವರ್ಷಗಳ ನಂತರ ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯು ತನ್ನ ಜೀವನದ ಎರಡನೇ ಅತ್ಯಂತ ಕಷ್ಟಕರ ದಿನವೆಂದು ಹೇಳಿಕೊಂಡಿದ್ದಾರೆ.
ಸಾಯುವ ಮುಂಚೆ ತಮ್ಮ ಅಜ್ಜಿ, ತನಗೇನಾದರೂ ಆದ್ರೆ ಅಳಬಾರದು ಎಂಬುದಾಗಿ ಹೇಳಿದ್ದರು ಎಂದು ರಾಹುಲ್ ಗಾಂಧಿ ವಿವರಿಸಿದ್ದಾರೆ. ಹೀಗಾಗಿ ಅಂತ್ಯಕ್ರಿಯೆಯಲ್ಲಿ ತನ್ನ ಮುಖವನ್ನು ರಾಹುಲ್ ಮರೆಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇನ್ನು ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತಮ್ಮ ಅಜ್ಜಿಯ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅಜ್ಜಿಯೊಂದಿಗೆ ಆಟವಾಡುತ್ತಿರುವ (ಚಿಕ್ಕ ಹುಡುಗಿಯಾಗಿ) ಫೋಟೋವನ್ನು ಅವರು ಟ್ವೀಟ್ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇಂದಿರಾ ಗಾಂಧಿ ಇಬ್ಬರೂ ನಗುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದು.