ಕಾನ್ಪುರ: ಬಾಲಿವುಡ್ ನ ಹಮ್ ದಿಲ್ ದೇ ಚುಕೇ ಸನಮ್ ಸಿನಿಮಾವನ್ನು ನೋಡಿದ್ದೀರಾ..? ಇದ್ರಲ್ಲಿ ಐಶ್ವರ್ಯಾ ರೈ ಸಲ್ಮಾನ್ ರನ್ನು ಪ್ರೀತಿಸಿದ್ದರೂ ಅಜಯ್ ರನ್ನು ಮದುವೆಯಾಗಬೇಕಾಯಿತು. ವಿಷಯ ಗೊತ್ತಾದ ಪತಿ ಪ್ರೇಮಿಗಳನ್ನು ಒಂದು ಮಾಡೋಕೆ ಮುಂದಾಗುತ್ತಾನೆ. ಇಂಥದ್ದೆ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಿನಿಮಾದಲ್ಲಿ ಕೊನೆಗೆ ಪತ್ನಿ ಐಶ್ವರ್ಯಾ ಪ್ರಿಯಕರನ ಬಳಿ ಹೋಗದೆ ಪತಿ ಬಳಿ ಬರುತ್ತಾಳೆ. ಆದ್ರೆ ಇಲ್ಲಿ ಮಾತ್ರ ಹಾಗೇ ಆಗಿಲ್ಲ.
ಹೌದು, ಗುರುಗ್ರಾಮದಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪಂಕಜ್ ಎಂಬಾತ 5 ತಿಂಗಳ ಹಿಂದೆ ಅಂದ್ರೆ ಮೇನಲ್ಲಿ ಕೋಮಲ್ ಳನ್ನು ವಿವಾಹವಾಗಿದ್ದಾನೆ. ಆದರೆ, ಮದುವೆಯಾದಾಗಿನಿಂದ ಪತ್ನಿ ಪಂಕಜ್ ಬಳಿ ಸರಿಯಾಗಿ ಮಾತನಾಡುತ್ತಿರಲಿಲ್ಲವಂತೆ. ಕೊನೆಗೆ ಇದರ ಕಾರಣವೇನು ಎಂದು ಕಂಡು ಹಿಡಿದ ಪತಿಗೆ ನಿಜಾಂಶ ಗೊತ್ತಾಗಿದೆ.
ಪತ್ನಿ ಕೋಮಲ್, ಪಿಂಟೋ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ಆದರೆ, ಮನೆಯವರು ಪಂಕಜ್ ಜೊತೆ ವಿವಾಹ ಮಾಡಿದ್ದಾರೆ. ವಿಷಯ ಗೊತ್ತಾದ ಕೂಡಲೇ ಪಂಕಜ್, ಕೋಮಲ್ ಮನೆಯವರ ಬಳಿ ತಿಳಿಸಿದ್ದಾನೆ. ಆಕೆಗೆ ಎಷ್ಟೇ ಬುದ್ಧಿವಾದ ಹೇಳಿದ್ರೂ ಆಕೆ ಮಾತ್ರ ತನ್ನ ಪಟ್ಟು ಬಿಟ್ಟಿಲ್ಲ.
ನಂತರ ಈ ವಿಷಯವು ಕೌಟುಂಬಿಕ ದೌರ್ಜನ್ಯ ವಿರೋಧಿ ಕೋಶ ಮತ್ತು ಆಶಾಜ್ಯೋತಿ ಕೇಂದ್ರಕ್ಕೆ ತಲುಪಿದೆ. ಅಲ್ಲಿ ಮಹಿಳೆ, ಆಕೆಯ ಪತಿ ಹಾಗೂ ಪ್ರಿಯಕರ ಮತ್ತು ಸಂಬಂಧಿಕರ ನಡುವೆ ಸಭೆ ನಡೆಸಲಾಯಿತು. ಈ ವೇಳೆ ಕೋಮಲ್ ತಾನು ಪ್ರಿಯಕರನ ಜೊತೆ ಇರುವುದಾಗಿ ಹೇಳಿದ್ದಾಳೆ. ಕೊನೆಗೆ ಇದಕ್ಕೆ ಒಪ್ಪಿಕೊಂಡ ಪಂಕಜ್ ಎಲ್ಲರ ಸಮ್ಮುಖದಲ್ಲಿ ತನ್ನ ಪತ್ನಿ ಹಾಗೂ ಪ್ರಿಯಕರನ ಮದುವೆಯ ಏರ್ಪಾಡು ಮಾಡಿದ್ದಾನೆ.