ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗಷ್ಟೇ ಅಪರೂಪದ ಫೋಟೋ ಹಂಚಿಕೊಂಡಿದ್ದರು ಅಪ್ಪು 30-10-2021 9:23AM IST / No Comments / Posted In: Latest News, Live News, Entertainment ಕನ್ನಡಿಗರ ಪ್ರೀತಿಯ ಅಪ್ಪು ಇನ್ನಿಲ್ಲ ಅನ್ನೋದನ್ನು ಅಭಿಮಾನಿಗಳಿಗೆ ಇನ್ನೂ ಕೂಡ ಅರಗಿಸಿಕೊಳ್ಳಲಾಗುತ್ತಿಲ್ಲ. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಅಂತಾ ಬಾಲನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ಇಂದು ಬಹಳ ಎತ್ತರಕ್ಕೆ ತಲುಪಿದ್ದರು. ಆದರೆ ವಿಧಿಯಾಟ ಬಲು ಕ್ರೂರ ಎಂಬಂತೆ ಪುನೀತ್ ಅವರು ಹೃದಯಾಘಾತದಿಂದ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ತಮ್ಮ ಬಾಲ್ಯದ ದಿನಗಳ ಕೆಲವು ಅಪರೂಪದ ಫೋಟೋಗಳನ್ನು ಇತ್ತೀಚೆಗಷ್ಟೇ ಅವರು ಇನ್ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ತಂದೆ ಡಾ. ರಾಜ್ ಕುಮಾರ್, ತಾಯಿ ಪಾರ್ವತಮ್ಮ ಸೇರಿದಂತೆ, ಇತರೆ ಕುಟುಂಬದ ಸದಸ್ಯರ ಅಪರೂಪದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಕಳೆದ ತಿಂಗಳಷ್ಟೆ ಪುನೀತ್ ರಾಜ್ಕುಮಾರ್ ತಮ್ಮ ತಂದೆ ರಾಜ್ಕುಮಾರ್ ಅವರೊಂದಿಗೆ 1988 ರಲ್ಲಿ ನಯಾಗರಾ ಜಲಪಾತಕ್ಕೆ ಭೇಟಿ ನೀಡಿದ್ದ ಭಾವನಾತ್ಮಕ ಫೋಟೋವನ್ನು ಹಂಚಿಕೊಂಡಿದ್ದರು. ಪುನೀತ್ ರಾಜ್ಕುಮಾರ್ ಅವರು 1980ರ ದಶಕದಲ್ಲಿ ನಡೆದ ಗೋಕಾಕ್ ಆಂದೋಲನದಲ್ಲೂ ತಮ್ಮ ತಂದೆಯೊಂದಿಗೆ ಭಾಗವಹಿಸಿದ್ದರು. ಗೋಕಾಕ್ ಚಳುವಳಿ ಸಂದರ್ಭದಲ್ಲಿ ತೆಗೆದ ಅಪರೂಪದ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದರು.