ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನ ಕನ್ನಡ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದ್ದು, ಇಡೀ ಚಿತ್ರರಂಗವೇ ಕಣ್ಣೀರ ಕಡಲಲ್ಲಿ ಮುಳುಗಿದೆ.
ಸದಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪವರ್ ಸ್ಟಾರ್ ಗೆ ಇಂದು ಇದ್ದಕ್ಕಿದ್ದಂತೆ ತೀವ್ರ ಎದೆ ನೋವು ಕಾಣಿಸಿಕೊಂಡು ಹೃದಯಾಘಾತಕ್ಕೀಡಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಇಂದು ಬೆಳಿಗ್ಗೆ 10 ಗಂಟೆಗೆ ತಮ್ಮ ತಂದೆಯ ಊರಾದ ಗಾಜನೂರಿಗೆ ಹೋರಡುತ್ತಿರುವುದಾಗಿ ಪುನೀತ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರಂತೆ. ಇಂದು ಗಾಜನೂರಿಗೆ ಹೋಗಿ ಸೋಮವಾರ ಬೆಂಗಳೂರಿಗೆ ವಾಪಸ್ ಆಗುವುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ.
ಗಾಜನೂರಿಗೆ ಹೊರಡಲು ಸಿದ್ಧತೆ ನಡೆಸಿದ್ದ ಪುನೀತ್ ಎಂದಿನಂತೆ ಜಿಮ್ ವರ್ಕೌಟ್ ಗೆ ಬಂದಿದ್ದರು. ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದು, ಪುನೀತ್ ಆಪ್ತರ ವಲಯ ಮಾತ್ರವಲ್ಲ ಇಡೀ ಚಿತ್ರರಂಗವೇ ಆಘಾತಕ್ಕೊಳಗಾಗಿದೆ.