ಲಿವ್ ಇನ್ ಸಂಬಂಧಗಳು ಜೀವನದ ಭಾಗವಾಗಿವೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಲಿವ್ ಇನ್ ರಿಲೇಷನ್ ಶಿಪ್ ಜೀವನದ ಭಾಗವಾಗಿ ಮಾರ್ಪಟ್ಟಿದ್ದು, ಅವುಗಳನ್ನು ಸಾಮಾಜಿಕ, ನೈತಿಕತೆಯ ಪರಿಕಲ್ಪನೆಗಳಿಗಿಂತ ಮುಖ್ಯವಾಗಿ ವೈಯಕ್ತಿಕ ದೃಷ್ಟಿಕೋನದಿಂದ ನೋಡಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇಬ್ಬರು ಅಂತರ್ಧರ್ಮೀಯ ಲಿವ್-ಇನ್ ಸಂಬಂಧದ ಹೊಂದಿದ್ದವರು ಸಲ್ಲಿಸಿದ್ದ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಪ್ರೀತಿಂಕರ್ ದಿವಾಕರ್ ಮತ್ತು ಅಶುತೋಷ್ ಶ್ರೀವಾಸ್ತವ ಅವರ ಪೀಠ ಈ ಅಭಿಪ್ರಾಯಪಟ್ಟಿದೆ.
ಮಹಿಳೆಯರ ಕುಟುಂಬದವರು ದೈನಂದಿನ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಆರೋಪಿಸಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಇಬ್ಬರಿಂದ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿತ್ತು.
ಕುಶಿನಗರದ ಸಂಗಾತಿಯೊಂದಿಗೆ ಎರಡು ವರ್ಷಗಳಿಂದ ಇದ್ದ ಶಯಾರಾ ಖಾತುನ್ ಅರ್ಜಿ ಸಲ್ಲಿಸಿದ್ದು, ಮೀರತ್ ನ ಸಂಗಾತಿಯೊಂದಿಗೆ ಇದ್ದ ಜೀನತ್ ಪರ್ವೀನ್ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಇವರು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ನೆರವು ಸಿಗಲಿಲ್ಲ. ಪರಿಣಾಮವಾಗಿ ಜೀವನ ಹಾಳಾಗಿದೆ ಎಂದು ದೂರಲಾಗಿದೆ.
ಸಂವಿಧಾನದ ಪರಿಚ್ಛೇದ 21 ರ ಅಡಿಯಲ್ಲಿ ಪ್ರತಿಪಾದಿಸಲ್ಪಟ್ಟಿರುವ ಜೀವಿಸುವ ಹಕ್ಕನ್ನು ರಕ್ಷಿಸಲು ಸಂಗಾತಿ ಹೊಣೆಗಾರರಾಗಿದ್ದಾರೆ. ಲಿವ್ ಇನ್ ರಿಲೇಷನ್ ಶಿಪ್ ಜೀವನದ ಭಾಗವಾಗಿ ಅಂಗೀಕರಿಸಲ್ಪಟ್ಟಿದೆ. ಸುಪ್ರೀಂ ಕೋರ್ಟ್, ಲಿವ್-ಇನ್ ಸಂಬಂಧವನ್ನು ಸಾಮಾಜಿಕ ನೈತಿಕತೆಯ ಕಲ್ಪನೆಗಳಿಗಿಂತ ಹೆಚ್ಚಾಗಿ ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸುವ ಬದುಕುವ ಹಕ್ಕಿನಿಂದ ಉಂಟಾಗುವ ವೈಯಕ್ತಿಕ ಸ್ವಾಯತ್ತತೆ ದೃಷ್ಠಿಯಿಂದ ನೋಡಬೇಕಾಗಿದೆ ಎಂದಿದ್ದು, ಪ್ರಕರಣದಲ್ಲಿ ಅರ್ಜಿದಾರರ ಹಕ್ಕುಗಳನ್ನು ರಕ್ಷಿಸಲು ಪೊಲೀಸ್ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.