ಐಷಾರಾಮಿ ಕ್ರೂಸ್ ನಲ್ಲಿ ಡ್ರಗ್ಸ್ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 8 ರಂದು ಬಂಧನಕ್ಕೊಳಗಾಗಿದ್ದ ಬಾಲಿವುಡ್ ಖ್ಯಾತ ನಟ ಶಾರೂಕ್ ಪುತ್ರ ಆರ್ಯನ್ ಖಾನ್ ಗೆ ಬಾಂಬೆ ಹೈಕೋರ್ಟ್ ಗುರುವಾರದಂದು ಜಾಮೀನು ನೀಡಿದೆ.
ಹೈಕೋರ್ಟ್ ಜಾಮೀನು ನೀಡಿದ ದಾಖಲೆಗಳು ಜೈಲಾಧಿಕಾರಿಗಳಿಗೆ ಸಕಾಲಕ್ಕೆ ತಲುಪದ ಕಾರಣ ಆರ್ಯನ್, ಅರ್ಥರ್ ರೋಡ್ ಜೈಲಿನಲ್ಲಿಯೇ ಇದ್ದು, ಇಂದು ಜಾಮೀನು ಪ್ರತಿ ಲಭ್ಯವಾದ ಬಳಿಕ ಬಿಡುಗಡೆಯಾಗುವ ಸಾಧ್ಯತೆಯಿದೆ.
ಈ ಮೊದಲು ತಮ್ಮ ಜಾಮೀನು ಅರ್ಜಿ ಸೆಷನ್ಸ್ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡ ವೇಳೆ ಖಿನ್ನತೆಗೆ ಒಳಗಾಗಿದ್ದ ಆರ್ಯನ್, ಗುರುವಾರ ಜಾಮೀನು ದೊರಕಿದ ಸುದ್ದಿ ತಿಳಿಯುತ್ತಿದ್ದಂತೆಯೇ ಲವಲವಿಕೆಯಿಂದ ಇದ್ದಾರೆಂದು ಮೂಲಗಳು ಹೇಳಿವೆ.
ಜೈಲಿನಲ್ಲಿದ್ದ ವೇಳೆ ಅನ್ಯಮನಸ್ಕರಾಗಿದ್ದ ಆರ್ಯನ್ ಖಾನ್ ಗೆ ಜೈಲಾಧಿಕಾರಿಗಳು ಪುಸ್ತಕಗಳನ್ನು ಓದುವಂತೆ ಸಲಹೆ ನೀಡಿದ್ದು, ʼದಿ ಲಯನ್ ಗೇಟ್ʼ ಪುಸ್ತಕ ಓದಿದ್ದಾರೆಂದು ಹೇಳಲಾಗಿದೆ. ಅಲ್ಲದೇ ರಾಮ ಮತ್ತು ಸೀತಾ ಕುರಿತ ಪುಸ್ತಕಗಳನ್ನೂ ಆರ್ಯನ್ ಓದಿದ್ದಾರಂತೆ.
ಜೈಲಿನಲ್ಲಿ ಆರ್ಯನ್ ಗೆ ಯಾವುದೇ ವಿಶೇಷ ಸೌಲಭ್ಯ ನೀಡಿರಲಿಲ್ಲವೆನ್ನಲಾಗಿದ್ದು, ತಮಗೆ ಜಾಮೀನು ಸಿಕ್ಕ ಸುದ್ದಿ ಬಳಿಕ ಸಂತಸದಿಂದಿರುವ ಆರ್ಯನ್ ಖಾನ್, ಸಂಕಷ್ಟದಲ್ಲಿರುವ ಕೆಲ ಸಹ ಖೈದಿಗಳ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರಂತೆ. ಕೆಲವರಿಗೆ ಜಾಮೀನು ದೊರಕಿಸುವ ನಿಟ್ಟಿನಲ್ಲಿ ಕಾನೂನು ನೆರವು ಕೊಡಿಸುವ ಕುರಿತೂ ಆರ್ಯನ್ ವಾಗ್ದಾನ ನೀಡಿದ್ದಾರಂತೆ.