ನವದೆಹಲಿ: ಅಟಲ್ ಪೆನ್ಷನ್ ಯೋಜನೆಯಡಿ ಖಾತೆ ತೆರೆಯುವವರಿಗೆ ಡಿಜಿಟಲ್ ಸೌಲಭ್ಯ ವಿಸ್ತರಿಸಲಾಗಿದೆ. ಆಧಾರ್ ಸಂಖ್ಯೆ ಬಳಸಿಕೊಂಡು ಇ –ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.
ಅಟಲ್ ಪೆನ್ಷನ್ ಯೋಜನೆ ಖಾತೆದಾರರು ಇ-ಕೆವೈಸಿ ಸಲುವಾಗಿ ಬ್ಯಾಂಕ್ ಶಾಖೆಗೆ ಹೋಗುವ ಅಗತ್ಯವಿಲ್ಲ. ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಅಟಲ್ ಪಿಂಚಣಿ ಯೋಜನೆ ಆಧಾರ್ ಇ –ಕೆವೈಸಿಯಿಂದ ಮತ್ತಷ್ಟು ಅನುಕೂಲಕರವಾಗಿದೆ. ಇದರೊಂದಿಗೆ ಚಂದಾದಾರರಿಗೆ ಇನ್ನೊಂದು ಆಯ್ಕೆ ಲಭಿಸಿದೆ. ಅಲ್ಲದೇ ನೋಂದಣಿ ಪ್ರಕ್ರಿಯೆ ಕಾಗದರಹಿತವಾಗಿದೆ ಎಂದು ಹೇಳಲಾಗಿದೆ.
ಇನ್ನು ಆಟಲ್ ಪೆನ್ಷನ್ ಯೋಜನೆಯಡಿ 18 ರಿಂದ 40 ವರ್ಷ ವಯೋಮಿತಿಯವರು ಹೂಡಿಕೆ ಮಾಡಬಹುದು. 60 ವರ್ಷದವರೆಗೆ ಹೂಡಿಕೆ ಮಾಡಬೇಕಿದ್ದು, ನಂತರ ಪ್ರತಿ ತಿಂಗಳಿಗೆ ನಿಗದಿತ ಪಿಂಚಣಿಯ ಸೌಲಭ್ಯ ಪಡೆಯಬಹುದು. ಹೂಡಿಕೆಯ ಅನುಸಾರ ಮಾಸಿಕ 1 ಸಾವಿರ ರೂ.ನಿಂದ 5000 ರೂಪಾಯಿಯವರೆಗೆ ಪಿಂಚಣಿ ಪಡೆಯಬಹುದಾಗಿದೆ.