ವಡೋದರಾ: ಇದು ನೋಡಲು ವಿಮಾನದಂತೆ ಕಂಡರೂ ಆಕಾಶದಲ್ಲಿ ಹಾರುವುದಿಲ್ಲ. ನಿಮಗೆ ಇದರೊಳಗೆ ಯಾವಾಗೆಲ್ಲ ಹೋಗಿ ಬರಬೇಕು ಅನಿಸುತ್ತೋ, ಆರಾಮಾಗಿ ಹೋಗಿ ಚೆನ್ನಾಗಿ ತಿಂದುಂಡು ಬರಬಹುದು. ಯಾಕಂದ್ರೆ ಇದೊಂದು ರೆಸ್ಟೋರೆಂಟ್..!
ವಿಭಿನ್ನವಾದ ರೆಸ್ಟೋರೆಂಟ್ ನಲ್ಲಿ ಆಹಾರ ಸವಿಯಬೇಕು ಎಂಬ ಆಸೆ ನಿಮಗಿದ್ರೆ ಖಂಡಿತಾ ನೀವಿಲ್ಲಿ ತೆರಳಬಹುದು. ಕೆಲವರಿಗೆ ವಿಮಾನದಲ್ಲಿ ಪ್ರಯಾಣಿಸಬೇಕು ಅನ್ನೋ ಆಸೆ ಇರುತ್ತದೆ. ಅದು ಸಾಧ್ಯವಾಗದವರು ಈ ರೆಸ್ಟೋರೆಂಟ್ ನಲ್ಲಿ ಕುಳಿತು ಬಗೆಬಗೆಯ ಖಾದ್ಯಗಳನ್ನು ಸವಿಯಬಹುದು. ಹೈಫ್ಲೈ ಎಂಬ ಹೆಸರಿನ ಈ ರೆಸ್ಟೋರೆಂಟ್ ಅನ್ನು ಗುಜರಾತ್ನ ವಡೋದರಾದಲ್ಲಿ ತೆರೆಯಲಾಗಿದೆ.
ಈ ರೆಸ್ಟೋರೆಂಟ್ ಅನ್ನು ವಿಮಾನದ ಬಿಡಿ ಭಾಗಗಳಿಂದ ಮಾಡಲಾಗಿದೆ. ಒಂದೇ ಸಮಯದಲ್ಲಿ ಈ ರೆಸ್ಟೋರೆಂಟ್ ಒಳಗೆ 106 ಜನರು ಕೂತು ಊಟ ಮಾಡಬಹುದು. ವೇಟರ್ ಅನ್ನು ಕರೆಯಲು ವಿಮಾನದಂತೆಯೇ ಸೆನ್ಸಾರ್ ಗಳನ್ನು ಕೂಡ ಈ ರೆಸ್ಟೋರೆಂಟ್ ವಿಮಾನದೊಳಗೆ ಅಳವಡಿಸಲಾಗಿದೆ. ಸಿಬ್ಬಂದಿ ಇಲ್ಲಿ ಕೆಲಸ ಮಾಡುವಾಗ ಕ್ಯಾಬಿನ್ ಸಿಬ್ಬಂದಿಯ ಸಮವಸ್ತ್ರವನ್ನು ಧರಿಸುತ್ತಾರೆ.
ವಿಮಾನ ನಿಲ್ದಾಣದಲ್ಲಿ ಯಾವ ರೀತಿ ವಿಮಾನ ಹತ್ತುತ್ತಿರೋ ಅದೇ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಈ ರೆಸ್ಟೋರೆಂಟ್ಗೆ ಪ್ರವೇಶಿಸುವ ಎಲ್ಲರಿಗೂ ವಿಮಾನ ಟಿಕೆಟ್ನಂತೆ ಬೋರ್ಡಿಂಗ್ ಪಾಸ್ ನೀಡಲಾಗುತ್ತದೆ.
ಈ ರೆಸ್ಟೋರೆಂಟ್ ನಿರ್ಮಿಸಲು ಏರ್ಬಸ್ 320 ಅನ್ನು ಬೆಂಗಳೂರಿನ ಕಂಪನಿಯಿಂದ ಖರೀದಿಸಲಾಗಿದೆ. ವಿಮಾನದ ಪ್ರತಿಯೊಂದು ಭಾಗಗಳನ್ನು ವಡೋದರಾಕ್ಕೆ ತಂದು, ಅದನ್ನು ರೆಸ್ಟೋರೆಂಟ್ನಂತೆ ಮರುರೂಪಿಸಲಾಗಿದೆ ಎಂದು ಮಾಲೀಕ, ವ್ಯವಸ್ಥಾಪಕ ನಿರ್ದೇಶಕ ಮುಖಿ ಹೇಳಿದ್ದಾರೆ.
ಈ ರೆಸ್ಟೋರೆಂಟ್ ವಿಮಾನದಲ್ಲಿ ಪ್ರಯಾಣಿಸುತ್ತಿರುವ ರೀತಿಯ ಅನುಭವವನ್ನೇ ನೀಡುತ್ತದೆಯಂತೆ. ಪಂಜಾಬಿ, ಚೈನೀಸ್, ಕಾಂಟಿನೆಂಟಲ್, ಇಟಾಲಿಯನ್, ಮೆಕ್ಸಿಕನ್ ಮತ್ತು ಥಾಯ್ ಸೇರಿದಂತೆ ವಿವಿಧ ಆಹಾರ ಆಯ್ಕೆಗಳು ಇಲ್ಲಿ ಲಭ್ಯವಿದೆ. ಇನ್ನು ಇಲ್ಲಿಗೆ ಭೇಟಿ ನೀಡಿದ ಗ್ರಾಹಕರು ಕೂಡ ಫುಲ್ ಖುಷ್ ಆಗಿದ್ದಾರೆ.