ದಾವಣಗೆರೆ: ಶಿಕ್ಷಕರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಕರನ್ನು ನೇಮಕ ಮಾಡುವುದು ಮಕ್ಕಳಿಗೆ ಪಾಠ ಮಾಡಲಿ ಎಂದು ಹೊರತು ಸಂಸಾರ ನೋಡಿಕೊಳ್ಳಲಿ ಎಂದಲ್ಲ ಎಂದು ಗುಡುಗಿದ್ದಾರೆ.
ದಾವಣಗೆರೆ ಜಿಲ್ಲೆ ಬೆಳಲಗೆರೆ ಗ್ರಾಮದಲ್ಲಿ ಮಾತನಾಡಿದ ಸಚಿವರು, ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಿಂತಿತ್ತು. ಎರಡು ದಿನಗಳಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಆದರೆ ಕೆಲ ವೈಯಕ್ತಿಕ ಸಮಸ್ಯೆಯನ್ನು ಸಾಮೂಹಿಕ ಸಮಸ್ಯೆ ಎಂದು ಬಿಂಬಿಸಲಾಗದು. ಶಿಕ್ಷಕ ವೃತ್ತಿಗೆ ಸೇರುವಾಗ ಜಿಲ್ಲಾವಾರು ಆಯ್ಕೆ ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನಾವು ಶಿಕ್ಷಕರನ್ನು ನೇಮಕ ಮಾಡಿರುವುದು ಪಾಠ ಮಾಡಲಿಕ್ಕೆ ಹೊರತು ಸಂಸಾರ ನೋಡಿಕೊಳ್ಳಲಿಕ್ಕಲ್ಲ. ಶಿಕ್ಷಕರ ಸಮಸ್ಯೆಗಿಂತ ಮೊದಲು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಬೇಕಿರುವ ಅಗತ್ಯವಿದೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಇದೇ ವೇಳೆ ಶೀಘ್ರದಲ್ಲಿಯೇ 5000 ಶಿಕ್ಷಕರ ನೇಮಕಾತಿ ನಡೆಯಲಿದೆ ಎಂದ ಸಚಿವರು ಹೊಸ ಶಿಕ್ಷಣ ನೀತಿ ಬಗ್ಗೆಯೂ ಮಾತನಾಡಿದ್ದು, ಹೊಸ ಶಿಕ್ಷಣ ನೀತಿ ಬಗ್ಗೆ ಅನಗತ್ಯ ಆರೋಪಗಳು ಸರಿಯಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಮಾತೃ ಭಾಷೆಗೆ ಆದ್ಯತೆ ನೀಡಲಾಗುವುದು ಎಂದರು.