ಹಿರೊಶಿಮಾ ಪರಮಾಣು ಬಾಂಬ್ ದಾಳಿಯಿಂದ ಪಾರಾಗಿ ಬಂದ ಬಳಿಕ ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಜಪಾನ್ನಲ್ಲಿ ಅಭಿಯಾನಗಳನ್ನು ನಡೆಸುತ್ತಿದ್ದ ಸುನಾವೋ ತ್ಸುಬೊಯ್ ನಿಧನರಾಗಿದ್ದಾರೆ. ಮೃತ ಸುನಾವೋಗೆ 96 ವರ್ಷ ವಯಸ್ಸಾಗಿತ್ತು. ರಕ್ತಹೀನತೆಯಿಂದಾಗಿ ಅನಿಯಮಿತ ಹೃದಯ ಬಡಿತದ ಸಮಸ್ಯೆ ಹೊಂದಿದ್ದ ಸುನಾವೋ ತ್ಸುಬೊಯ್ ಅಕ್ಟೋಬರ್ 24ರಂದು ನೈಋತ್ಯ ಜಪಾನ್ನ ಹಿರೊಶಿಮಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪರಮಾಣು ಬಾಂಬ್ ದಾಳಿಯ ವೇಳೆಯಲ್ಲಿ ಕೆಲ ವಿಕಿರಣಗಳ ಸಂಪರ್ಕಕ್ಕೆ ಸುನಾವೋ ಬಂದಿದ್ದರಿಂದ ಅವರಿಗೆ ಕ್ಯಾನ್ಸರ್ ಸೇರಿದಂತೆ ಇನ್ನಿತರ ಕಾಯಿಲೆಗಳು ಶುರುವಾಗಿದ್ದವು. ಅನೇಕ ವರ್ಷಗಳಿಂದ ಅವರು ಅನಿಮಿಯಾಗೆ ಚಿಕಿತ್ಸೆ ಪಡೆಯುತ್ತಲೇ ಇದ್ದರು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಅಧಿಕಾರಾವಧಿಯಲ್ಲಿ ಹಿರೊಶಿಮಾಗೆ ಭೇಟಿ ನೀಡಿದ್ದ ವೇಳೆ ಸುನಾವೋರನ್ನು ಭೇಟಿಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಹಿರೊಶಿಮಾ ಪರಮಾಣು ದಾಳಿಯಲ್ಲಿ ಸುಮಾರು 1,40,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಭಯಾನಕ ದಾಳಿಯಿಂದ ಪಾರಾಗುವಲ್ಲಿ ಸುನಾವೋ ತ್ಸುಬೊಯ್ ಯಶಸ್ವಿಯಾಗಿದ್ದರು. ಇದಾದ ಬಳಿಕ ತಮ್ಮ ಸಂಪೂರ್ಣ ಜೀವನವನ್ನು ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಜಾಗೃತಿ ಮೂಡಿಸಲು ಮೀಸಲಿಟ್ಟಿದ್ದರು.
1945ರ ಆಗಸ್ಟ್ 6ರಂದು ಹಿರೋಶಿಮಾದ ಮೇಲೆ ಅಮೆರಿಕ ದಾಳಿ ನಡೆಸಿದ ವೇಳೆಯಲ್ಲಿ ಸುನಾವೋರಿಗೆ ಕೇವಲ 20 ವರ್ಷ ವಯಸ್ಸಾಗಿತ್ತು. ಈ ದಾಳಿ ನಡೆಯುವ ವೇಳೆ ಸುನಾವೋ ಕಾಲೇಜಿಗೆ ತೆರಳುತ್ತಿದ್ದರಂತೆ. ದಾಳಿಯಲ್ಲಿ ಬದುಕುಳಿದಿದ್ದರೂ ಸಹ ಸುನಾವೋಗೆ ಸಾಕಷ್ಟು ಸುಟ್ಟ ಗಾಯಗಳಾಗಿದ್ದವು ಮಾತ್ರವಲ್ಲದೇ ಕಿವಿಗೆ ಹಾನಿ ಉಂಟಾಗಿತ್ತು.
ಬೆತ್ತಲಾಗಿದ್ದ ಸುನಾವೋ ಮೂರು ಗಂಟೆಗಳ ಕಾಲ ನಿರಂತರವಾಗಿ ಓಡಿದ್ದರು. ಆದರೆ ಕೊನೆಗೂ ಓಡಲು ಅವರಲ್ಲಿ ಯಾವುದೇ ಶಕ್ತಿ ಉಳಿದಿರಲಿಲ್ಲ. ಪ್ರಜ್ಞಾಹೀನರಾಗಿ ನೆಲದ ಮೇಲೆ ಉರುಳಿದ್ದರು. ಬರೋಬ್ಬರಿ 40 ದಿನಗಳ ಬಳಿಕ ಸುನಾವೋಗೆ ಪ್ರಜ್ಞೆ ಬಂದಿತ್ತಂತೆ..! ಅಷ್ಟರಲ್ಲಿ ಯುದ್ಧ ಮುಗಿದು ಹೋಗಿತ್ತು.
ಸುನಾವೋ ದೇಹ ದುರ್ಬಲಗೊಂಡಿತ್ತು ಅಲ್ಲದೇ ಮೈ ತುಂಬಾ ಗಾಯಗಳಾಗಿದ್ದವು. ಪ್ರಜ್ಞಾವಸ್ಥೆಗೆ ಮರಳಿದ ಬಳಿಕ ನೆಲದ ಮೇಲೆ ತೆವಳುವ ಹಂತದಲ್ಲಿದ್ದರು. ಅಲ್ಲಿಂದ ಪುನಃ ಮೊದಲಿನಂತಾಗಲು ಪಡಬಾರದ ಯಾತನೆಯನ್ನು ಅನುಭವಿಸಿದ್ದರು.
ಜಪಾನ್ನ ಶಾಲೆಗಳಲ್ಲಿ ಗಣಿತ ವಿಷಯ ಭೋದಿಸುತ್ತಿದ್ದ ಸುನೋಯ್, ಯುದ್ಧದ ಸಮಯದಲ್ಲಿ ಆದ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಿದ್ದರು.