ಹುಬ್ಬಳ್ಳಿ: ರಾಜಕೀಯ ನಾಯಕರು ವೋಟಿಗಾಗಿ ನೋಟು ಹಂಚುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಕಾರಣ ಉಪಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರು ಪಕ್ಷದ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಗೆ ಹಣ ಕೊಟ್ಟು ವೋಟು ಪಡೆಯುವುದು ಗೊತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡದ ಬಿಜೆಪಿಗೆ ಹಣ ನೀಡಿ ಮತ ಪಡೆದುಕೊಳ್ಳುವ ಕಲೆ ಕರಗತವಾಗಿದೆ ಎಂದು ಆರೋಪಿಸಿದ್ದಾರೆ.
ಗ್ಯಾಸ್ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಅಭಿವೃದ್ದಿ ಕೆಲಸ ಮುಂದಿಟ್ಟು ಮತ ಕೇಳಲು ಮಾಡಿದ್ದಾದರೂ ಏನು? ಹೀಗಾಗಿ ಹಣ ಹಂಚಿ ವೋಟು ಪಡೆದುಕೊಳ್ಳುತ್ತಿದ್ದಾರೆ. ಹಾನಗಲ್ ನಲ್ಲಿ ಒಂದೊಂದು ಕ್ಷೇತ್ರದಲ್ಲಿ 10-12 ಸಚಿವರನ್ನು ಹಾಕಿದ್ದಾರೆ. ಎಲ್ಲರೂ ದುಡ್ಡಿನ ಚೀಲವನ್ನು ತೆಗೆದುಕೊಂಡು ಬಂದು ಕೂತಿದ್ದಾರೆ. ಬಿಜೆಪಿ ಹಣ ಹಂಚಿಕೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ ಎಂದು ಹೇಳಿದರು.
ಈ ನಡುವೆ ಹಾನಗಲ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ನಾಯಕರು ಬೆಂಗಳೂರು, ಹುಬ್ಬಳ್ಳಿಯಿಂದ ದುಡ್ದಿನ ಚೀಲ ತಂದಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂಬುದು ಅವರಿಗೆ ಖಚಿತವಾಗಿದೆ. ಬಿಜೆಪಿ ಹವಾ ಒಡೆಯಲು ಕಾಂಗ್ರೆಸ್ ನಾಯಕರು ತಂತ್ರ ಹೆಣೆದಿದ್ದಾರೆ. ಹಣ ಕೊಟ್ಟು ಮತದಾರರನ್ನು ಓಲೈಸಲು ಮುಂದಾಗಿದ್ದಾರೆ. ಕಾಂಗ್ರೆಸ್ ನ ನೋಟಿನ ಚೀಲಗಳನ್ನು ತಿರಸ್ಕರಿಸಿ ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದ್ದಾರೆ.
ಒಟ್ಟಾರೆ ಉಪಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ರಾಜಕೀಯ ಪಕ್ಷಗಳ ನಾಯಕರೇ ಹಣ ಹಂಚಿಕೆ ವಿಚಾರವಾಗಿ ಆರೋಪ-ಪ್ರತ್ಯಾರೋಗಳಲ್ಲಿ ತೊಡಗಿದ್ದಾರೆ.