ಬೆಂಗಳೂರು: ಹೊಸ ವಾಹನ ಖರೀದಿಸಿದವರು ಇನ್ನು ಮುಂದೆ ಸಾರಿಗೆ ಕಚೇರಿಗೆ ವಾಹನವನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಆನ್ಲೈನ್ ಮೂಲಕವೇ ಹೊಸ ವಾಹನ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಅಧಿಕೃತ ಮಾರಾಟಗಾರರಿಂದ ಖರೀದಿಸಿದ ಸಂಪೂರ್ಣವಾಗಿ ನಿರ್ಮಿತವಾದ ವಾಹನಗಳನ್ನು ಸಾರಿಗೆ ಇಲಾಖೆ ಕಚೇರಿಗೆ ತೆಗೆದುಕೊಂಡು ಹೋಗದೆ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ಸೋಮವಾರದಿಂದ ಜಾರಿಗೆ ತರಲಾಗಿದೆ.
ವಾಹನ್ -4 ಪೋರ್ಟಲ್ ನಲ್ಲಿ ವಾಹನ ಮಾರಾಟಗಾರರು ಹೊಸ ವಾಹನದ ಎಲ್ಲಾ ವಿವರಗಳನ್ನು ದಾಖಲಿಸಿ ನೋಂದಣಿಯ ತೆರಿಗೆ ಮತ್ತು ಶುಲ್ಕಗಳನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು. ಅರ್ಜಿಯನ್ನು ಸಂಬಂಧಿಸಿದ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಆನ್ಲೈನ್ನಲ್ಲಿ ಅರ್ಜಿ ಸ್ವೀಕರಿಸಿ ಪರಿಶೀಲನೆ ನಡೆಸಿ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಸಂಖ್ಯೆಯನ್ನು ಹಂಚಿಕೆ ಮಾಡಲಾಗುವುದು.
ಈ ಮೊದಲು ಸಾರಿಗೆ ಇಲಾಖೆ ಕಚೇರಿಗೆ ವಾಹನ ತೆಗೆದುಕೊಂಡು ಹೋಗಬೇಕಿತ್ತು. ಮೋಟಾರು ವಾಹನ ನಿರೀಕ್ಷಕರು ವಾಹನ ಪರಿವೀಕ್ಷಣೆ ನಂತರ ನೋಂದಣಿ ಮಾಡುವ ಪದ್ಧತಿ ಜಾರಿಯಲ್ಲಿತ್ತು. ಕೇಂದ್ರ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿ ತಂದಿದ್ದು, ಆನ್ಲೈನ್ ಮೂಲಕವೇ ಹೊಸ ವಾಹನಗಳ ನೋಂದಣಿ ಮಾಡಲಾಗುವುದು ಎಂದು ಹೇಳಲಾಗಿದೆ.